Saturday, 14th December 2024

ಮಿಚಾಂಗ್‌ ಚಂಡಮಾರುತದ ಅಬ್ಬರ: ಮೃತರ ಸಂಖ್ಯೆ 8ಕ್ಕೆ ಏರಿಕೆ

ಚೆನ್ನೈ: ತಮಿಳುನಾಡಿನಲ್ಲಿ ‘ಮಿಚಾಂಗ್‌’ ಚಂಡಮಾರುತದ ಅಬ್ಬರ ಮಂಗಳವಾರವೂ ಮುಂದುವರಿದಿದೆ. ಧಾರಾಕಾರ ಮಳೆ, ಗಾಳಿಯಿಂದ ಸಂಭವಿಸಿದ ಅವಘಡಗಳಲ್ಲಿ ಮೃತಪಟ್ಟವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.

ಮಳೆ ಪ್ರಮಾಣ ತುಸು ತಗ್ಗಿದ್ದು, ಚೆನ್ನೈ ವಿಮಾನ ನಿಲ್ದಾಣದಲ್ಲಿ ಎಲ್ಲಾ ವಿಮಾನಗಳು ಹಾರಾಟ ನಡೆಸುತ್ತಿವೆ. ಮುಖ್ಯಮಂತ್ರಿ ಸ್ಟಾಲಿನ್ ಅವರು ಅಧಿಕಾರಿ ಗಳೊಂದಿಗೆ ಸಭೆ ನಡೆಸಿದ್ದು, ಪರಿಹಾರ ಕ್ರಮಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಚೆನ್ನೈ ವಿಮಾನನಿಲ್ದಾಣ ರನ್‌ವೇ ಜಲಾವೃತಗೊಂಡಿದ್ದರಿಂದ ಅಧಿಕಾರಿಗಳು 70 ವಿಮಾನಗಳ ಯಾನ ರದ್ದುಪಡಿಸಿದ್ದರು. ರೈಲು, ಬಸ್ಸುಗಳ ಸಂಚಾರ ವೂ ವಿಳಂಬ ಅಥವಾ ರದ್ದತಿ ಕಾರಣದಿಂದಾಗಿ ವ್ಯತ್ಯಯಗೊಂಡಿತ್ತು. ಕೊಯಮತ್ತೂರು, ಮೈಸೂರು ಕಡೆಗೆ ತೆರಳಬೇಕಿದ್ದ ರೈಲುಗಳ ಸಂಚಾರ ರದ್ದಾಗಿದೆ ಎಂದು ರೈಲ್ವೆ ಇಲಾಖೆಯು ತಿಳಿಸಿತ್ತು.

ತಮಿಳುನಾಡು ಸರ್ಕಾರ, ಚೆನ್ನೈ ಹಾಗೂ ತಿರುವಲ್ಲೂರು, ಕಾಂಚೀಪುರಂ, ಚೆಂಗಲಪಟ್ಟು ಜಿಲ್ಲೆಗಳಲ್ಲಿ ರಜೆ ಘೋಷಿಸಿದೆ. ಅಗ್ನಿಶಾಮಕ ಸೇವೆ, ಆಸ್ಪತ್ರೆ, ಪೆಟ್ರೋಲ್‌ ಬಂಕ್‌, ಹೋಟೆಲ್‌ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದೆ.