Friday, 13th December 2024

MiG-29 Fighter Jet: ಬೆಚ್ಚಿ ಬೀಳಿಸುವಂತಿದೆ MiG-29 ಯುದ್ಧ ವಿಮಾನ ಪತನದ ದೃಶ್ಯ! ಭೀಕರ ವಿಡಿಯೋ ಭಾರೀ ವೈರಲ್‌

MiG-29 Fighter Jet

ಲಖನೌ: ಭಾರತೀಯ ವಾಯುಪಡೆಯ (Indian Air Force) MiG-29 ಯುದ್ಧ ವಿಮಾನ (MiG-29 fighter jet) ಪತನಗೊಂಡು ಹೊತ್ತಿ ಉರಿದ ಘಟನೆ ನವೆಂಬರ್‌ 4 ರಂದು ಉತ್ತರ ಪ್ರದೇಶದ (Uttar Pradesh) ಆಗ್ರಾದ (Agra) ಸಾಂಗಾ ಗ್ರಾಮದಲ್ಲಿ ನಡೆದಿತ್ತು. ಇದೀಗ ಯುದ್ಧವಿಮಾನ ಪತನಗೊಂಡು ಕೆಳಗೆ ಬೀಳುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ವೈರಲ್‌ ಆಗಿರುವ ವಿಡಿಯೋದಲ್ಲಿ ವಿಮಾನ ನಿಯಂತ್ರಣ ಕಳೆದುಕೊಂಡು ಗಿರಕಿ ಹೊಡೆದು ಕೆಳಕ್ಕೆ ಬೀಳುತ್ತಿರುವುದು ಮತ್ತು ಜನ ಗಾಬರಿಗೊಂಡು ಓಡುತ್ತಿರುವುದನ್ನು ದೃಶ್ಯದಲ್ಲಿ ಕಾಣಬಹುದಾಗಿದೆ. ವಿಡಿಯೋದ ಕೊನೆಯಲ್ಲಿ ಪ್ಯಾರಚೂಟ್‌ ಸಹಾಯದಿಂದ ಪೈಲಟ್‌ ಇಳಿಯುತ್ತಿರುವ ದೃಶ್ಯವೂ ಸೆರೆಯಾಗಿದೆ.

ನಿನ್ನೆ ಆಗ್ರಾದ ಬಳಿ ನಡೆದ MiG-29 ಯುದ್ಧ ವಿಮಾನದಲ್ಲಿ ದೋಷ ಕಾಣಿಸಿಕೊಂಡು ಬೆಂಕಿ ತಗುಲಿದೆ ಎಂದು ತಿಳಿದು ಬಂದಿದೆ. ವಿಮಾನದೊಳಗಿದ್ದ ಪೈಲಟ್‌ ತಕ್ಷಣ ಜಿಗಿದು ಅಪಾಯದಿಂದ ಪಾರಾಗಿದ್ದಾರೆ. ಪತನವಾದ ಮಿಗ್‌ 29 ಫೈಟರ್‌ ಜೆಟ್‌ ಸೋಮವಾರ ಪಂಜಾಬ್‌ನ ಅದಾಂಪುರ ವಾಯು ನೆಲೆಯಿಂದ ಟೇಕ್‌ ಆಫ್‌ ಅಗಿ ಆಗ್ರಾದತ್ತ ತೆರಳುತ್ತಿತ್ತು. ಹಾರಾಟದ ವೇಳೆ ತಾಂತ್ರಿಕ ದೋಷ ಕಂಡಿದ್ದರಿಂದ ಪೈಲೆಟ್‌ ವಿಮಾನವನ್ನು ಕೆಳಗಿಳಿಸಲು ನೋಡಿದ್ದಾರೆ. ಆದರೆ ಅದಾಗಲೇ ವಿಮಾನಕ್ಕೆ ಬೆಂಕಿ ತಗುಲಿತ್ತು ಎಂದು ತಿಳಿದು ಬಂದಿದೆ.

ಘಟನೆ ಸಂಬಂಧ ಭಾರತೀಯ ವಾಯುಸೇನೆ ಪ್ರತಿಕ್ರಿಯೆ ನೀಡಿದ್ದು ತಾಂತ್ರಿಕ ದೋಷಕ್ಕೆ ಕಾರಣವೇನೆಂದು ತನಿಖೆಗೆ ಆದೇಶ ನೀಡಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಜೈಸಲ್ಮೇರ್ ಬಳಿ ಲಘು ಯುದ್ಧ ವಿಮಾನ ಅಪಘಾತ

ರಾಜಸ್ಥಾನದಲ್ಲೂ ನಡೆದಿತ್ತು ಇಂತಹದ್ದೇ ಘಟನೆ

2024 ರ ಸೆಪ್ಟೆಂಬರ್‌ನಲ್ಲಿ ರಾಜಸ್ಥಾನದ ಬಾರ್ಮರ್‌ನಲ್ಲಿಮಿಗ್ -29 ಯುದ್ಧ ವಿಮಾನ ಪತನಗೊಂಡಿತ್ತು. ತಾಂತ್ರಿಕ ದೋಷದಿಂದ ವಿಮಾನದಲ್ಲಿ ಬೆಂಕಿ ಹತ್ತಿಕೊಂಡಿತ್ತು ಎಂದು ವರದಿಯಾಗಿತ್ತು. 2020 ರ ಫೆಬ್ರವರಿಯಲ್ಲಿ ಗೋವಾದ ನೌಕಾನೆಲೆ ಐಎನ್‌ಎ ಹಂಸಾದಿಂದ ಕಾರವಾರ ವಾಯು ಮಾರ್ಗವಾಗಿ ಬೆಳಗ್ಗೆ ಎಂದಿನಂತೆ ಹಾರಾಟ ನಡೆಸಿದ್ದ ಮಿಗ್‌-29ಕೆ ವಿಮಾನ ಪತನವಾಗಿತ್ತು. ಮಿಗ್‌ 29ಕೆ ವಿಮಾನದ ಬಲಭಾಗಕ್ಕೆ ಪಕ್ಷಿ ಬಂದು ಅಪ್ಪಳಿಸಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿತ್ತು. ವಿಮಾನದಲ್ಲಿದ್ದ ಪೈಲೆಟ್‌ ಪ್ರಾಣಾಪಾಯದಿಂದ ಪಾರಾಗಿದ್ದರು. 1987 ರಲ್ಲಿ ರಷ್ಯಾದಿಂದ ಭಾರತ ಸರ್ಕಾರ ಈ ಯುದ್ಧ ವಿಮಾನವನ್ನು ತರಿಸಿಕೊಂಡಿದೆ.