ಚಂಡೀಗಢ: ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪಂಜಾಬ್ ಪೊಲೀಸರು, 2015ರ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಖೈರಾ ಅವರನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸರೊಂದಿಗೆ ಈ ವೇಳೆ ವಾಗ್ವಾದ ನಡೆಸಿದ ಖೈರಾ, ಜಾಲತಾಣದಲ್ಲಿ ಲೈವ್ಗೆ ತೆರಳಿ ಆಕ್ಷೇಪ ವ್ಯಕ್ತಪಡಿಸಿದರು.
ಬಂಧನದ ವಾರಂಟ್ ತೋರಿಸುವಂತೆ ಕೇಳಿದ ಖೈರಾ, ತನ್ನನ್ನು ಕರೆದುಕೊಂಡು ಹೋಗ ಲು ಕಾರಣವೇನು ಎಂದು ಪ್ರಶ್ನಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಬೆಳಗ್ಗೆ ಚಂಡೀಗಢ ನಿವಾಸದ ಮೇಲೆ ಹಠಾತ್ ದಾಳಿ ನಡೆಸಿದ ಪೊಲೀಸರು, ಶಾಸಕ ಸುಖಪಾಲ್ ಸಿಂಗ್ ಖೈರಾ ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಶಾಸಕರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಶಾಸಕ ಸುಖಪಾಲ್ ಸಿಂಗ್ ಖೈರಾ ಅವರನ್ನು ವಶಕ್ಕೆ ಪಡೆಯುವ ವೇಳೆ ಕುಟುಂಬಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಬಂಧನ ಖಂಡಿಸಿರುವ ಕಾಂಗ್ರೆಸ್ ಶಾಸಕರು, ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಆಪ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಶಾಸಕ ಸುಖಪಾಲ್ ಸಿಂಗ್ ಖೈರಾ ಅವರನ್ನು ನಕಲಿ ಪ್ರಕರಣದಲ್ಲಿ ಬಂಧಿಸಲಾಗುತ್ತಿದೆ. ಈ ಮೂಲಕ ರಾಜ್ಯದಲ್ಲಿ “ಜಂಗಲ್ ರಾಜ್” ಚಾಲ್ತಿಯಲ್ಲಿದೆ ಎಂದು ಆರೋಪ ಮಾಡಿದ್ದಾರೆ.