Friday, 13th December 2024

ಭಾರತದಲ್ಲಿ ಕಳುವಾಗುತ್ತಿದ್ದ ಮೊಬೈಲ್‌ ನೇಪಾಳ, ಬಾಂಗ್ಲಾದೇಶದಲ್ಲಿ ಮಾರಾಟ

ಮುಂಬೈ: ದೇಶದಲ್ಲಿ ಕಳುವಾಗುತ್ತಿದ್ದ ಮೊಬೈಲ್ ಫೋನ್‍ಗಳನ್ನು ನೇಪಾಳ ಮತ್ತು ಬಾಂಗ್ಲಾದೇಶದಲ್ಲಿ ಮಾರಾಟ ಮಾಡುತ್ತಿದ್ದ ಅಕ್ರಮ ದಂಧೆಯನ್ನು ಮುಂಬೈ ಪೊಲೀಸರು ಬೇಧಿಸಿದ್ದಾರೆ.

ಕಳೆದ ಜು.15 ರಂದು ಮನ್ಖುರ್ದ್ ಪ್ರದೇಶದ ಪೊಲೀಸರ ದಾಳಿಯ ಸಮಯದಲ್ಲಿ ಐಫೋನ್‍ ಗಳು ಸೇರಿದಂತೆ 480 ಮೊಬೈಲ್ ಹ್ಯಾಂಡ್‍ಸೆಟ್‍ಗಳನ್ನು ವಶಪಡಿಸಿಕೊಳ್ಳ ಲಾಗಿದ್ದು, ಗ್ಯಾಂಗ್‍ನ ಸದಸ್ಯರು ವಿದೇಶಗಳಲ್ಲಿಯೂ ಸಂಪರ್ಕ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊಬೈಲ್ ಫೋನ್‍ಗಳಲ್ಲದೆ, ಪೊಲೀಸರು ದಾಳಿಯ ವೇಳೆ 9.5 ಕೆಜಿ ಗಾಂಜಾ, 174 ವಿದೇಶಿ ಮದ್ಯದ ಬಾಟಲಿಗಳು, ಎರಡು ಕತ್ತಿಗಳು ಮತ್ತು ಲ್ಯಾಪ್‍ಟಾಪ್ ವಶಪಡಿಸಿಕೊಂಡಿದ್ದಾರೆ. ಗ್ಯಾಂಗ್‍ನ ಇಬ್ಬರು ಸದಸ್ಯರಾದ ಮೆಹಬೂಬ್ ಅಲಿಯಾಸ್ ಲಲ್ಲು ಬದ್ರುದ್ದೀನ್ ಖಾನ್ (37) ಮತ್ತು ಫೈಯಾಜ್ ಶೇಖ್ (31)ಬಂಧಿಸಲಾಗಿದ್ದು, ಮತ್ತೊಬ್ಬ ಆಸಿಫ್ ಇದ್ರಿಸಿ (25) ನನ್ನು ಮುಂಬೈ ಅಪರಾಧ ವಿಭಾಗವು ಉತ್ತರ ಪ್ರದೇಶದ ಜಹಾಂಗೀರಾಬಾದ್ ಪಟ್ಟಣ ದಲ್ಲಿ ಬಂಧಿಸಿದೆ.

ಈ ಗ್ಯಾಂಗ್ ನಗರದಲ್ಲಿ ಕಳ್ಳರಿಂದ ಮೊಬೈಲ್ ಫೋನ್‍ಗಳನ್ನು ಖರೀದಿಸಿ ಅನಂತರ ಅವರು ಫೋನ್ ಸೀಕ್ರೇಟ್ ಕೊಡ್ ಐಎಂ ಸಂಖ್ಯೆಯನ್ನು ಬದಲಾಯಿಸುತ್ತಾರೆ ಮತ್ತು ಅವುಗಳನ್ನು ಭಾರತ, ನೇಪಾಳ ಮತ್ತು ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ಮಾರಾಟ ಮಾಡುತ್ತಾರೆ ಮತ್ತು ಹವಾಲಾ ಮೂಲಕ ಹಣವನ್ನು ಸ್ವೀಕರಿಸುತ್ತಿದ್ದರು ಎಂದು ಹಿರಿಯ ಪೊಲೀಸ್‍ ಅಧಿಕಾರಿ ಹೇಳಿದ್ದಾರೆ.