Wednesday, 11th December 2024

ಗುಜರಾತ್ ಗಲಭೆ ಪ್ರಕರಣ: ಮೋದಿಗೆ ಸುಪ್ರೀಂನಲ್ಲೂ ಕ್ಲೀನ್ ಚಿಟ್

ನವದೆಹಲಿ: ಗುಜರಾತ್ ಗಲಭೆ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕ್ಲೀನ್ ಚಿಟ್ ನೀಡಿರುವುದನ್ನು ಪ್ರಶ್ನಿಸಿ ಜಾಕಿಯಾ ಜಾಫ್ರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

2002ರ ಗಲಭೆ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರ 63 ಮಂದಿಗೆ ವಿಶೇಷ ತನಿಖಾ ತಂಡ (ಎಸ್ ಐಟಿ) ಕ್ಲೀನ್ ಚಿಟ್ ನೀಡಿರುವುದನ್ನು ಪ್ರಶ್ನಿಸಿ ಹಿಂಸಾ ಚಾರದಲ್ಲಿ ಮೃತಪಟ್ಟಿದ್ದಕಾಂಗ್ರೆಸ್ ಮುಖಂಡ ಎಹ್ಸಾನ್ ಜಾಫ್ರಿ ಅವರ ಪತ್ನಿ ಜಾಕಿಯಾ ಜಾಫ್ರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

2002ರ ಫೆಬ್ರವರಿ 28ರಂದು ಅಹಮಹಾಬಾದ್ ನ ಗುಲ್ಬರ್ಗ್ ಸೊಸೈಟಿಯಲ್ಲಿ ನಡೆದ ಹಿಂಸಾಚಾರದಲ್ಲಿ ಎಹ್ಸಾನ್ ಜಾಫ್ರಿ ಮೃತಪಟ್ಟಿದ್ದರು. ಗುಜರಾತ್ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ತೀರ್ಪನ್ನು ಕಾಯ್ದಿರಿ ಸಿತ್ತು.

ಎಸ್ ಐಟಿ ಕ್ಲೀನ್ ಚಿಟ್ ವಿರುದ್ಧ ಜಾಫ್ರಿ ಸಲ್ಲಿಸಿದ್ದ ಮನವಿಯನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್, 2002ರಲ್ಲಿ ಗುಜರಾತ್ ಸಿಎಂ ಆಗಿದ್ದ, ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರ 63 ಮಂದಿಗೆ ಕ್ಲೀನ್ ಚಿಟ್ ನೀಡಿರುವ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿದೆ.

ಪ್ರಧಾನಿ ಮೋದಿಗೆ ಕ್ಲೀನ್ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗೆ ಯಾವುದೇ ಮಾನ್ಯತೆ ಇಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ.