Thursday, 12th December 2024

Money Tips: ಡಿಜಿಟಲ್‌ ಪೇಮೆಂಟ್‌ ವಂಚನೆಯ ಜಾಲದಿಂದ ಪಾರಾಗಬೇಕೆ? ಈ ಟಿಪ್ಸ್‌ ಫಾಲೋ ಮಾಡಿ

Money Tips

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಡಿಜಿಟಲ್‌ ಪೇಮೆಂಟ್‌ (Digital payment) ಎನ್ನುವುದು ದೇಶದಲ್ಲಿ ಜನಪ್ರಿಯವಾಗುತ್ತಿದೆ. ಹಳ್ಳಿಯಿಂದ ಹಿಡಿದು ನಗರ ಪ್ರದೇಶಗಳವರಗೆ ಎಲ್ಲೆಡೆ ಈ ಪಾವತಿ ವಿಧಾನ ವ್ಯಾಪಿಸಿದೆ. ಪರ್ಸ್‌ನಲ್ಲಿ, ಜೇಬಿನಲ್ಲಿ ಹಣ ಇಟ್ಟುಕೊಂಡು ಓಡಾಡುವವರ ಸಂಖ್ಯೆಯಂತೂ ವಿರಳ ಎನ್ನುವಂತಾಗಿದೆ. ಡೆಬಿಟ್‌/ಕ್ರೆಡಿಟ್‌ ಕಾರ್ಡ್‌, ಮೊಬೈಲ್‌ನಲ್ಲಿ ಪೇಮೆಂಟ್‌ ಅಪ್ಲಿಕೇಷನ್‌ ಇದ್ದರೆ ಮುಗೀತು, ಎಲ್ಲ ವ್ಯವಹಾರವನ್ನು ಬೆರಳ ತುದಿಯಲ್ಲೇ ಮುಗಿಸಿ ಬಿಡಬಹುದು. ಹಾಗಂತ ನಗದು ನಮ್ಮ ಕೈಯಲ್ಲಿ ಇಲ್ಲ ಎನ್ನುವ ಕಾರಣಕ್ಕೆ ಮೈ ಮರೆಯುವಂತಿಲ್ಲ. ನಾವು ಚಾಪೆ ಕೆಳಗೆ ತೂರಿದರೆ ರಂಗೋಲಿ ಕೆಳಗೆ ತೂರುವ ವಂಚಕರಿದ್ದಾರೆ. ಸ್ವಲ್ಪ ಎಚ್ಚರ ತಪ್ಪಿದರೆ ಸಾಕು ಅವರು ನೇರ ನಮ್ಮ ಖಾತೆಗೇ ಕನ್ನ ಹಾಕುತ್ತಾರೆ. ಹೀಗಾಗಿ ಆನ್‌ಲೈನ್‌ನಲ್ಲಿ ವ್ಯವಹಾರ ನಡೆಸುವಾಗ ಸಾಕಷ್ಟು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ವಂಚಕರ ಬಲೆಗೆ ಬೀಳದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾಗುತ್ತದೆ. ಇಷ್ಟಾಗಿಯೂ ನೀವು ವಂಚನೆಗೆ ಒಳಗಾಗಿದ್ದರೆ ತಕ್ಷಣ ಎಚ್ಚೆತ್ತುಕೊಳ್ಳುವ ಮೂಲಕ ಹೆಚ್ಚಿನ ಸಮಸ್ಯೆಯಾಗದಂತೆ ನೋಡಿಕೊ‍ಳ್ಳಬಹುದು. ಡಿಜಿಟಲ್ ಹಗರಣದಿಂದ ಪಾರಾಗಲು ನೀವು ಏನೆಲ್ಲ ಮಾಡಬೇಕು ಎನ್ನುವ ಬಗ್ಗೆ ಪಾವತಿ ಸೇವೆ ನೀಡುವ ವಿಸಾ (Visa) ಕಂಪೆನಿ ಮಾರ್ಗದರ್ಶನ ನೀಡಿದೆ. ಅದೇನು ಎನ್ನುವ ವಿವರ ಇಂದಿನ ಮನಿ ಟಿಪ್ಸ್‌ (Money Tips)ನಲ್ಲಿದೆ.

ಅಧಿಕೃತ ಗ್ರಾಹಕ ಸೇವಾ ನಂಬರ್‌ಗೆ ಕರೆ ಮಾಡಿ

ಒಂದುವೇಳೆ ನೀವು ವಂಚನೆಗೊಳಗಾಗಿರುವ ಬಗ್ಗೆ ಅನುಮಾನ ಬಂದರೆ ಸಮಯ ಕಳೆಯದೆ ತಕ್ಷಣ ನಿಮ್ಮ ಬ್ಯಾಂಕ್‌ ಅಥವಾ ಪಾವತಿ ಸೇವಾದಾರರ ಕಸ್ಟಮರ್‌ ಕೇರ್‌ ನಂಬರ್‌ಗೆ ಕರೆ ಮಾಡಿ. ನೆನಪಿಡಿ ಅಧಿಕೃತ ನಂಬರ್‌ಗೆ ಮಾತ್ರ ಕರೆ ಮಾಡಿ. ಈ ಮೂಲಕ ನಿಮ್ಮ ಖಾತೆಯನ್ನು ಫ್ರೀಜ್ ಮಾಡಿ ಅಥವಾ ನಿಮ್ಮ ಕಾರ್ಡ್ / ಪಾವತಿ ವಿಧಾನವನ್ನು ಬ್ಲಾಕ್‌ ಮಾಡಿ. ಇದು ಯಾವುದೇ ವಂಚನೆಯ ಚಟುವಟಿಕೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ತಕ್ಷಣ ವರದಿ ಮಾಡಿ

ನೀವು ವಂಚನೆಗೆ ಒಳಗಾದ ವಿಚಾರವನ್ನು ಕೂಡಲೇ ಬ್ಯಾಂಕ್‌ ಅಥವಾ ನ್ಯಾಷನಲ್‌ ಸೈಬರ್‌ ಕ್ರೈಂ ಹೆಲ್ಪ್‌ಲೈನ್‌ (1930 ನಂಬರ್‌ಗೆ ಕರೆ ಮಾಡಿ) ಗಮನಕ್ಕೆ ತನ್ನಿ. ನ್ಯಾಷನಲ್‌ ಸೈಬರ್‌ ಕ್ರೈಂ ರಿಪೋರ್ಟಿಂಗ್‌ ಪೋರ್ಟಲ್‌ (NCRP) ಅಥವಾ ಸಮೀಪದ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿ. ಈ ದೂರಿನ ಪ್ರತಿಯನ್ನು ಎಚ್ಚರಿಕೆಯಿಂದ ತೆಗೆದಿಡಿ.

ಪ್ರತಿಯೊಂದು ವಿವರಗಳನ್ನು ದಾಖಲಿಸಿ

ವಂಚನೆಗೊಳಗಾದಾಗ ಭಯಭೀತರಾಗುವುದು ಸಹಜ. ಹೀಗಾಗಿ ಗೊಂದಲಕ್ಕೀಡಾಗದೆ ಎಚ್ಚರಿಕೆಯಿಂದ ಪರಿಸ್ಥಿತಿಯನ್ನು ಎದುರಿಸಿ. ವಂಚನೆಗೊಳಗಾಗಿದ್ದೀರಿ ಎಂಬ ಸಂಶಯ ಮೂಡಿದ ಕ್ಷಣದಿಂದ ಸಂಭವಿಸಿದ ಘಟನೆಗಳನ್ನು ಮೆಲುಕು ಹಾಕಿ ಅನ್ನು ದಾಖಲಿಸಿ. ಸಂಭಾಷಣೆಯನ್ನು ರೆಕಾರ್ಡ್ ಮಾಡಿ, ಸ್ಕ್ರೀನ್ ಶಾಟ್‌ಗಳನ್ನು ತೆಗೆದಿಟ್ಟುಕೊಳ್ಳಿ, ಯಾವುದೇ ಸಂದೇಶಗಳಿದ್ದರೆ ಅದನ್ನು ಸೇವ್‌ ಮಾಡಿಟ್ಟುಕೊಳ್ಳಿ. ನೀವು ಸ್ಕ್ಯಾಮರ್‌ನೊಂದಿಗೆ ಹಂಚಿಕೊಂಡಿರಬಹುದಾದ ವಹಿವಾಟು ಐಡಿ, ದಿನಾಂಕಗಳು, ಮೊತ್ತಗಳು ಇತ್ಯಾದಿ ವಿವರಗಳನ್ನು ದೂರಿನೊಂದಿಗೆ ದಾಖಲಿಸಿ.

ನಿಮ್ಮ ಭದ್ರತೆಯನ್ನು ನವೀಕರಿಸಿ

ವಂಚನೆಗೆ ಒಳಗಾಗದಿರಲು ಪಾಸ್‌ವರ್ಡ್‌ಗಳನ್ನು ಆಗಾಗ ಬದಲಾಯಿಸಿ. ನಿಮ್ಮ ಭದ್ರತೆಯನ್ನು ನವೀಕರಿಸಿ. ಎರಡು-ಅಂಶಗಳ ದೃಢೀಕರಣವನ್ನು ಸಕ್ರಿಯಗೊಳಿಸಿ. ಆನ್‌ಲೈನ್ ವಹಿವಾಟುಗಳಿಗೆ ಆರ್‌ಬಿಐ ಕಡ್ಡಾಯಗೊಳಿಸಿರುವ ಟೋಕನೈಸೇಶನ್‌ನಂತಹ ದೃಢವಾದ ಭದ್ರತಾ ಕ್ರಮಗಳೊಂದಿಗೆ ಪಾವತಿ ಆಯ್ಕೆಗಳನ್ನು ಆರಿಸಿ.

ಅನುಭವ ಹಂಚಿಕೊಳ್ಳಿ

ಡಿಜಿಟಲ್ ಪಾವತಿ ವಂಚನೆಗೆ ಬಲಿಯಾದ ವಿಚಾರವನ್ನು ಸ್ನೇಹಿತರು, ಕುಟುಂಬ ಸದಸ್ಯರು ಮತ್ತು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ. ನೀವು ಏನು ತಪ್ಪು ಮಾಡಿದ್ದೀರಿ, ಅದರಿಂದ ಹೇಗೆ ಹೊರಗೆ ಬಂದಿದ್ದೀರಿ ಎನ್ನುವ ವಿವರಗಳನ್ನು ನಮೂದಿಸಿ. ಇದರಿಂದ ಇತರರು ವಂಚನೆಗೊಳಗಾಗುವುದನ್ನು ತಪ್ಪಿಸಬಹುದು. ಇತರರು ಈ ಬಗ್ಗೆ ಬರೆದಿದ್ದರೆ ಅದನ್ನು ಗಮನವಿಟ್ಟು ಓದಿ.

ಕಾಯಿಲೆ ಬಂದ ಬಳಿಕ ಔಷಧ ಹುಡುಕುವುದಕ್ಕಿಂತ ಕಾಯಿಲೆ ಬರದಂತೆ ನೋಡಿಕೊಳ್ಳುವುದು ಅಗತ್ಯ ಎನ್ನುವ ಮಾತಿದೆ. ಹೀಗಾಗಿ ವಂಚನೆಗೆ ಒಳಗಾಗದಂತೆ ಮೊದಲೇ ಎಚ್ಚರಿಕೆವಹಿಸುವುದು ಅತ್ಯಗತ್ಯ.

ಈ ಸುದ್ದಿಯನ್ನೂ ಓದಿ: Money Tips: Health Insurance ಮಾಡಿಸುವ ತಿಳಿದಿರಲೇ ಬೇಕಾದ ಅಂಶಗಳಿವು