Friday, 13th December 2024

ಸಂಸದ ಮೊಂಡಾಲ್ ವಾಹನ ಸುತ್ತುವರೆದು ಕಪ್ಪು ಧ್ವಜ ತೋರಿಸಿದ ಟಿಎಂಸಿ ಕಾರ್ಯಕರ್ತರು

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಸಂಸದ ಸುನೀಲ್ ಮೊಂಡಾಲ್ ವಾಹನವನ್ನು ಸುತ್ತು ವರೆದ ಟಿಎಂಸಿ ಕಾರ್ಯಕರ್ತರು ಕಪ್ಪು ಧ್ವಜ ತೋರಿಸಿ ಗಲಭೆ ನಡೆಸಿದ್ದಾರೆ.

ಸುನೀಲ್ ಮೊಂಡಾಲ್ ಸನ್ಮಾನ ಕಾರ್ಯಕ್ರಮಕ್ಕೆಂದು ಬಿಜೆಪಿ ಕಚೇರಿಗೆ ಆಗಮಿಸು ತ್ತಿದ್ದಂತೆಯೇ ಟಿಎಂಸಿ ಕಾರ್ಯಕರ್ತರು ಕಪ್ಪು ಧ್ವಜ ತೋರಿಸಿ ಕಾರನ್ನು ಸುತ್ತುವರೆದು ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಗಲಭೆ ಮುಗಿಯಿತಾದರೂ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು.

ಡಿ.19ರಂದು ಸುನೀಲ್ ಮೊಂಡಾಲ್ ಬಿಜೆಪಿಗೆ ಸೇರ್ಪಡೆಯಾಗಿದ್ದರು. ತೃಣಮೂಲ ಕಾಂಗ್ರೆಸ್ ನ ಹಲವು ಬಂಡಾಯ ಮುಖಂಡರು ಪಶ್ಚಿಮ ಬಂಗಾಳದ ಮಿಡ್ನಾಪುರ ದಲ್ಲಿ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಬಿಜೆಪಿ ಕಚೇರಿ ಸಮೀಪವೇ ಶನಿವಾರ ಟಿಎಂಸಿ ವೇದಿಕೆ ಸಿದ್ಧಪಡಿಸಿತ್ತು. ಬಿಜೆಪಿ ಕಚೇರಿಗೆ ಬಂಡಾಯ ನಾಯಕರು ಆಗಮಿಸು ತ್ತಿದ್ದಂತೆಯೇ ಟಿಎಂಸಿ ಕಾರ್ಯಕರ್ತರು ಅವರ ವಿರುದ್ಧ ಘೋಷಣೆ ಕೂಗುತ್ತಿದ್ದರು. ಈ ಬೆಳವಣಿಗೆ ನಡೆಯುತ್ತಿದ್ದಂತೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಯಿತು.

ನಂತರ ಟಿಎಂಸಿ ವೇದಿಕೆ ಹಾಗೂ ಬಿಜೆಪಿ ಕಚೇರಿ ನಡುವೆ ಬ್ಯಾರಿಕೇಡ್ ಹಾಕಲಾಯಿತು. ಘಟನೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ಜಯ್ ಪ್ರಕಾಶ್ ಮಜುಂದಾರ್, ಇವೆಲ್ಲ ಬಿಜೆಪಿ ಮಣಿಸಲು ತೃಣಮೂಲ ಕಾಂಗ್ರೆಸ್ ತಂತ್ರಗಳು ಎಂದು ಪ್ರತಿಕ್ರಿಯಿಸಿದ್ದಾರೆ.