ಚೆನ್ನೈ: ಶ್ರೇಷ್ಠ ಕೃಷಿ ವಿಜ್ಞಾನಿ, ಭಾರತದ ಹಸಿರು ಕ್ರಾಂತಿಯ ಪಿತಾಮಹ ಎಂದೇ ಖ್ಯಾತ ಡಾ.ಮೊಂಕೊಂಬ ಸಾಂಬಶಿವನ್ ಸ್ವಾಮಿನಾಥನ್(98 ) ಚೆನ್ನೈನಲ್ಲಿ ನಿಧರಾಗಿದ್ದಾರೆ.
ಸ್ವಾಮಿನಾಥನ್ ಅವರು ರೈತರ ಆದಾಯ ದ್ವಿಗುಣ, ಬೇಸಾಯದತ್ತ ಯುವಕರನ್ನು ಸೆಳೆಯುವುದು, ಶೂನ್ಯ ಬಂಡವಾಳ ಕೃಷಿ, ಭವಿಷ್ಯದ ಬೇಸಾಯದ ಪದ್ಧತಿ ಅಳವಡಿಕೆ ಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಚೆನ್ನೈನಲ್ಲಿ ವಾಸವಿದ್ದ ಅವರು ವಯೋಸಹಜವಾಗಿ ಸಾವನ್ನಪ್ಪಿದ್ದಾರೆ.
ಎಂಎಸ್ ಸ್ವಾಮಿನಾಥನ್ ಅವರ ಪತ್ನಿ ಮಿನಾ ಸ್ವಾಮಿನಾಥನ್ ಅವರು ಕಳೆದ ವರ್ಷ ನಿಧನರಾಗಿದ್ದರು. ಸ್ವಾಮಿನಾಥನ್ ಅವರು ಈಗ ಮೂವರು ಪುತ್ರಿಯರಾದ ಸೌಮ್ಯ ಸ್ವಾಮಿನಾಥನ್, ಮಥುರಾ ಸ್ವಾಮಿನಾಥನ್ ಮತ್ತು ನಿತ್ಯ ಸ್ವಾಮಿನಾಥನ್ ಅವರನ್ನು ಅಗಲಿದ್ದಾರೆ.
ಆಗಸ್ಟ್ 7, 1925 ರಂದು ಕುಂಭಕೋಣಂ ಜಿಲ್ಲೆಯಲ್ಲಿ ಜನಿಸಿದ ಸ್ವಾಮಿನಾಥನ್ ಅವರು ತಮ್ಮ ಸ್ವಂತ ಊರಿನಲ್ಲಿ ಶಿಕ್ಷಣವನ್ನು ಪೂರ್ಣಗೊಳಿಸಿದರು ಮತ್ತು ವೈದ್ಯರಾಗಲು ಬಯಸಿದ್ದರು. ಆದರೆ 1943 ರಲ್ಲಿ ಬಂಗಾಳದಲ್ಲಿ ಕ್ಷಾಮವು ಅವರ ಜೀವನದ ಗುರಿ ಯನ್ನು ಬದಲಿಸಿತು. ಸುಮಾರು 30 ಲಕ್ಷ ಜನ ಹಸಿವಿನಿಂದ ಸಾವನ್ನಪ್ಪಿದ್ದನ್ನು ಕಂಡು ಕೃಷಿ ಸಂಶೋಧನೆಯಲ್ಲಿ ತೊಡಗಲು ತಮ್ಮ ಹಾದಿಯನ್ನು ತಿರುಗಿಸಿದರು.
ಅವರು ಕೇರಳದ ತಿರುವನಂತಪುರಂನ ಮಹಾರಾಜ ಕಾಲೇಜಿನಲ್ಲಿ ಪ್ರಾಣಿಶಾಸ್ತ್ರದಲ್ಲಿ ಪದವಿ ಪಡೆದರು ಮತ್ತು ಮದ್ರಾಸ್ ಕೃಷಿ ಕಾಲೇಜಿನಲ್ಲಿ ಕೃಷಿ ವಿಜ್ಞಾನವನ್ನು ಪೂರ್ಣಗೊಳಿಸಿದರು. UPSC ಪರೀಕ್ಷೆಯಲ್ಲಿ ಯಶಸ್ವಿಯಾದ ನಂತರ ಸಿಕ್ಕಿದ್ದ IPS ಅವಕಾಶವನ್ನು ತಿರಸ್ಕರಿಸಿ UNESCO ದಿಂದ ಸ್ಕಾಲರ್ ಶಿಪ್ ಪಡೆದು ಕೃಷಿ ಸಂಶೋಧನೆಯಲ್ಲಿ ತೊಡಗಿದರು. ಅವರು ಭತ್ತ, ಗೋಧಿ ಮತ್ತು ಗೆಣಸಿನ ಮೇಲೆ ಪ್ರಮುಖ ಸಂಶೋಧನೆಗಳನ್ನು ನಡೆಸಿದರು.
ಎಂಎಸ್ ಸ್ವಾಮಿನಾಥನ್ ಅವರು ನಮ್ಮ ಪರಿಸರಕ್ಕೆ ಸೂಕ್ತವಾದ ಹೆಚ್ಚಿನ ಇಳುವರಿ ನೀಡುವ ಬೀಜಗಳನ್ನು ಅಭಿವೃದ್ಧಿಪಡಿಸುವ ಮೂಲಕ ಮತ್ತು ರೈತರಲ್ಲಿ ಅವುಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಹಸಿರು ಕ್ರಾಂತಿಗೆ ಕಾರಣರಾದರು.