Wednesday, 11th December 2024

ಸಚಿನ್ ವಾಜೆ ಮಾ.25ರವರೆಗೂ ಎನ್‌ಐಎ ವಶಕ್ಕೆ

ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ಅವರ ಮುಂಬೈ ನಿವಾಸದ ಬಳಿ ಸ್ಫೋಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರನ್ನು ನ್ಯಾಯಾಲಯ ಮಾ.25ರವರೆಗೂ ರಾಷ್ಟ್ರೀಯ ತನಿಖಾ ದಳದ ವಶಕ್ಕೆ ನೀಡಿದೆ.
ಶನಿವಾರ ಮಧ್ಯರಾತ್ರಿ ಪೊಲೀಸ್ ಅಧಿಕಾರಿ ಸಚಿನ್ ಅವರನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ನಿರಂತರವಾಗಿ ಪ್ರಶ್ನಿಸಿದ ಬಳಿಕ ಸಚಿನ್ ವಾಜೆ ಅವರನ್ನು ಬಂಧಿಸಲಾಗಿದೆ. ಭಾನುವರ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದ್ದು, ವಿಚಾರಣೆ ನಡೆಸಿದ ಮಾ.25ರವರೆಗೂ ವಾಜೆ ಅವರನ್ನು ಎನ್ ಐಎ ತನಿಖೆಗೆ ನೀಡಿತು.
ಫೆಬ್ರುವರಿ 25ರಂದು ಅಂಬಾನಿ ನಿವಾಸದ ಬಳಿ ಸ್ಫೋಟಕ ತುಂಬಿದ್ದ ವಾಹನ ಪತ್ತೆಯಾಗಿತ್ತು. ವಾಹನದಲ್ಲಿ ಜಿಲೆಟಿನ್ ಕಡ್ಡಿ ಹಾಗೂ ಬೆದರಿಕೆ ಪತ್ರ ಇತ್ತು. ಮುಕೇಶ್ ಅವರ ನಿವಾಸದ ಬಳಿ ಪತ್ತೆಯಾಗಿದ್ದ ವಾಹನವು ಮನ್‌ಸುಖ್ ಹಿರೇನ್ ಅವರಿಗೆ ಸೇರಿದ್ದಾ ಗಿತ್ತು. ಈ ವಾಹನ ಕಳವಾಗಿದ್ದ ಕುರಿತು ಅವರು ಪೊಲೀಸರಿಗೆ ದೂರು ನೀಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಥಾಣೆಯಲ್ಲಿ ನಿಗೂಢ ರೀತಿಯಲ್ಲಿ ಅವರ ಶವ ಪತ್ತೆಯಾಗಿತ್ತು.