Saturday, 14th December 2024

ಸೈರನ್‍ ಕಿರಿಕಿರಿ ತಪ್ಪಿಸಲು ವಾಹನಗಳಲ್ಲಿ ಸಂಗೀತಮಯ ಹಾರನ್ : ಸಚಿವ ನಿತೀನ್ ಗಡ್ಕರಿ

ನವದೆಹಲಿ: ವಾಹನಗಳಲ್ಲಿ ಇನ್ನು ಮುಂದೆ ಸಂಗೀತಮಯ ಹಾರನ್ (ಶಬ್ದ) ಅಳವಡಿಸಲು ಅಗತ್ಯ ಕಾನೂನು ತಿದ್ದುಪಡಿ ತರುವುದಾಗಿ ಕೇಂದ್ರ ಸಾರಿಗೆ ಸಚಿವ ನಿತೀನ್ ಗಡ್ಕರಿ ತಿಳಿಸಿದ್ದಾರೆ.

ಆಂಬ್ಯುಲೆನ್ಸ್ ಮತ್ತು ಪೊಲೀಸ್ ಅಧಿಕಾರಿಗಳ ವಾಹನಗಳಲ್ಲಿ ಬಳಸುವ ಸೈರನ್‍ಗಳನ್ನು ಬದಲಾವಣೆ ಮಾಡಲು ಅಧ್ಯಯನ ನಡೆಸಲಾಗುತ್ತಿದೆ. ನಾಸಿಕ್‍ನಲ್ಲಿ ಹೆದ್ಧಾರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಪ್ರಸ್ತುತ ಆಂಬ್ಯುಲೆನ್ಸ್, ಪೊಲೀಸ್ ಅಧಿಕಾರಿಗಳು ಹಾಗೂ ಸಚಿವರ ವಾಹನಗಳಲ್ಲಿ ಬಳಸುವ ಸೈರನ್‍ಗಳು ಕಿರಿಕಿರಿ ಉಂಟು ಮಾಡುತ್ತಿವೆ. ಬದಲಿಗೆ ಆಕಾಶವಾಣಿ ಯಲ್ಲಿ ಕೇಳಿ ಬರುವ ಮಧುರವಾದ ಸಂಗೀತವನ್ನು ಅಳವಡಿಸಲು ಚಿಂತನೆ ನಡೆದಿದೆ. ಸಚಿವರು ಸೇರಿದಂತೆ ಇತರೇ ಗಣ್ಯ ವ್ಯಕ್ತಿಗಳ ಕಾರುಗಳ ಮೇಲೆ ಬಳಕೆ ಮಾಡುವ ಕೆಂಪುದೀಪಗಳಿಗೆ ಅಂತ್ಯ ಹಾಡಲು ನಿರ್ಧರಿಸಿರುವುದಾಗಿ ಗಡ್ಕರಿ ತಿಳಿಸಿದ್ದಾರೆ.

ಸಂಗೀತಗಾರರು ನುಡಿಸಿರುವ ತಬಲಾ, ಕೊಳಲು, ವೈಯಲಿನ್, ಹಾರ್ಮೋನಿಯಂ, ಬಾಯಲ್ಲಿ ಸೃಷ್ಟಿಸಲಾದ ಸಂಗೀತದ ಟೋನ್‍ ಗಳನ್ನು ವಾಹನಗಳ ದಾರಿ ಕೇಳುವ ಶಬ್ಧಗಳಾಗಿ ಬಳಕೆ ಮಾಡಲು ಚಿಂತನೆ ನಡೆದಿದೆ. ಅದಕ್ಕಾಗಿ ಅಗತ್ಯ ಕಾನೂನು ತರಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ವಾಹನಗಳಲ್ಲಿ ಕರ್ಕಶ ಶಬ್ದ ಮಾಡುವ ಹಾರನ್‍ಗಳನ್ನು ಬಳಕೆ ಮಾಡಲು ನ್ಯಾಯಾಲಯ ಗಳು ನಿರ್ಬಂಧ ವಿಧಿಸಿವೆ. ವಾಹನಗಳ ಮುಂಭಾಗ ಮತ್ತು ಹಿಂಭಾಗದಲ್ಲಿ ನೋಂದಣಿ ಫಲಕದ ಜೊತೆಯಲ್ಲಿ ಅಳವಡಿಕೆ ಮಾಡಲಾದ ನಾಮಫಲಕಗಳನ್ನು ತೆರವು ಮಾಡಲು ಸೂಚನೆ ನೀಡಿದೆ.

ಪೊಲೀಸರು ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳು ಎಷ್ಟೆ ಬಿಗಿ ಕ್ರಮಗಳನ್ನು ಕೈಗೊಂಡರು ಪಡ್ಡೆ ಹುಡುಗರು ತಮ್ಮ ವಾಹನಗಳಿಗೆ ವಿಕಾರ ಶಬ್ದ ಮಾಡುವ ಹಾರನ್‍ಗಳನ್ನು ಅಳವಡಿಸಿಕೊಂಡು ಜನಸಾಮಾನ್ಯರಿಗೆ ಕಿರಿಕಿರಿ ಮಾಡುತ್ತಿರುವುದು ಸಾಮಾನ್ಯವಾಗಿದೆ.