Wednesday, 11th December 2024

ಪ.ಬಂಗಾಳದ ಎಲ್ಲಾ ಲೋಕಸಭಾ ಸ್ಥಾನಗಳನ್ನು ಗೆಲ್ಲಬೇಕು: ನಮೋ

ಕೃಷ್ಣಾನಗರ: ತೃಣಮೂಲ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಪಶ್ಚಿಮ ಬಂಗಾಳದ ಎಲ್ಲಾ 42 ಲೋಕಸಭಾ ಸ್ಥಾನಗಳನ್ನು ಬಿಜೆಪಿ ಗೆಲ್ಲಬೇಕು ಎಂದು ರಾಜ್ಯ ಭಾರತೀಯ ಜನತಾ ಪಕ್ಷಕ್ಕೆ ಶನಿವಾರ ಟಾರ್ಗೆಟ್ ನೀಡಿದ್ದಾರೆ.

ನಾಡಿಯಾ ಜಿಲ್ಲೆಯ ಕೃಷ್ಣಾನಗರದಲ್ಲಿ 15 ಸಾವಿರ ಕೋಟಿ ರೂ. ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಸಾರ್ವಜನಿಕ ರ್ಯಾಲಿ ಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಟಿಎಂಸಿ ಎಂದರೆ ‘ತು, ಮೈನ್ ಔರ್ ಭ್ರಷ್ಟಾಚಾರ’ ಎಂದು ಆರೋಪಿಸಿದರು.

ಕೃಷ್ಣಾನಗರದ ಬಿಜೋಯ್ ಸಂಕಲ್ಪ ಸಭಾದಲ್ಲಿ ನೆರೆದಿದ್ದ ಜನರನ್ನುದ್ದೇಶಿಸಿ ಮಾತನಾಡಿದ ಅವರು, “ಇಷ್ಟು ಸಂಖ್ಯೆಯಲ್ಲಿ ಇಲ್ಲಿ ನೆರೆದಿರುವ ನಿಮ್ಮೆಲ್ಲ ರನ್ನು ನೋಡಿದಾಗ ‘ಎನ್‌ಡಿಎ ಸರ್ಕಾರ, 400 ಪಾರ್’ ಎಂದು ಹೇಳುವ ವಿಶ್ವಾಸ ಮೂಡುತ್ತಿದೆ.

“ಟಿಎಂಸಿ ದೌರ್ಜನ್ಯ, ಕುಟುಂಬ ರಾಜಕೀಯ ಮತ್ತು ದ್ರೋಹಕ್ಕೆ ಸಮಾನಾರ್ಥಕವಾಗಿದೆ. ಪಶ್ಚಿಮ ಬಂಗಾಳದ ಜನ ರಾಜ್ಯ ಸರ್ಕಾರದ ಕಾರ್ಯ ವೈಖರಿ ಯಿಂದ ನಿರಾಶೆಗೊಂಡಿದ್ದಾರೆ” ಎಂದು ಮೋದಿ ಹೇಳಿದರು.

ಸಂದೇಶ್‌ಖಾಲಿಯಲ್ಲಿ ಟಿಎಂಸಿ ನಾಯಕರ ವಿರುದ್ಧ ಮಹಿಳೆಯರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದನ್ನು ಉಲ್ಲೇಖಿಸಿದ ಮೋದಿ, ರಾಜ್ಯ ಸರ್ಕಾರ ಆ ಪ್ರದೇಶದ ‘ಸಂಕಷ್ಟದಲ್ಲಿರುವ ತಾಯಂದಿರು ಮತ್ತು ಸಹೋದರಿಯರನ್ನು’ ಬೆಂಬಲಿಸುವ ಬದಲು ಆರೋಪಿಗಳ ಪರ ನಿಂತಿದೆ ಎಂದು ಟೀಕಿಸಿದರು.

ಪುರುಲಿಯಾ ಜಿಲ್ಲೆಯಲ್ಲಿರುವ ದಾಮೋದರ್ ವ್ಯಾಲಿ ಕಾರ್ಪೊರೇಷನ್‌ನ ರಘುನಾಥಪುರ ಥರ್ಮಲ್ ಪವರ್ ಸ್ಟೇಷನ್ IIನೇ ಹಂತಕ್ಕೆ ಪ್ರಧಾನಿ ಮೋದಿ ಶಂಕುಸ್ಥಾಪನೆ ಮಾಡಿದರು.

ಇದೇ ವೇಳೆ 940 ಕೋಟಿ ರೂ.ಗೂ ಹೆಚ್ಚು ಮೌಲ್ಯದ ನಾಲ್ಕು ರೈಲು ಯೋಜನೆಗಳನ್ನು ಪ್ರಧಾನಿ ಮೋದಿ ದೇಶಕ್ಕೆ ಸಮರ್ಪಿಸಿದರು.