Friday, 13th December 2024

500 ರೂ. ಬದಲು 2,500 ರೂ ನಗದು: ಇಲ್ಲೊಂದು ದಾನಶೂರ ಎಟಿಎಂ…!

ನಾಗಪುರ: ನಾಗಪುರ ಜಿಲ್ಲೆಯ ಎಟಿಎಂನಿಂದ 500 ರೂಪಾಯಿ ಹಣ ವಿತ್‌ಡ್ರಾ ಮಾಡಲು ತೆರಳಿದ ವ್ಯಕ್ತಿಗೆ ಒಂದು 500 ರೂಪಾಯಿ ನೋಟಿನ ಬದಲು ಐದು ಕರೆನ್ಸಿ ನೋಟುಗಳನ್ನು ಎಟಿಎಂ ನೀಡಿದೆ.

 

ಎಡವಟ್ಟು ಆಗಿರಬಹುದು ಎಂದು ಮತ್ತೆ ಅದನ್ನೇ ಪುನರಾವರ್ತಿಸಿದ್ದಾರೆ. ಆಗಲೂ 500 ರೂಪಾಯಿ ಬದಲು 2,500 ರೂ ನಗದು ಬಂದಿದೆ. ನಗರದಿಂದ ಸುಮಾರು 30 ಕಿಮೀ ದೂರದಲ್ಲಿ ಇರುವ ಖಾಪರ್ಖೇಡಾ ಪಟ್ಟಣದ ಖಾಸಗಿ ಬ್ಯಾಂಕ್‌ನ ಈ ಎಟಿಎಂ, ಕೇಳಿದ್ದಕ್ಕಿಂತ ಐದು ಪಟ್ಟು ಹೆಚ್ಚು ಹಣ ನೀಡಿದೆ. ಈ ಸುದ್ದಿ ಕಾಳ್ಗಿಚ್ಚಿನಂತೆ ಪಟ್ಟಣದ ತುಂಬಾ ಹರಡಿದೆ. ಎಟಿಎಂನಿಂದ ಹಣ ಪಡೆದುಕೊಳ್ಳಲು ಬೃಹತ್ ಸಂಖ್ಯೆಯಲ್ಲಿ ಜನರು ಸಾಲುಗಟ್ಟಿ ನಿಂತಿದ್ದಾರೆ.

ಅನೇಕರು ತಮ್ಮ ಕಾರ್ಡ್ ಬಳಸಿ ಹಣ ಪಡೆದುಕೊಂಡಿದ್ದಾರೆ. ಕೊನೆಗೆ ಬ್ಯಾಂಕ್ ಗ್ರಾಹಕರೊಬ್ಬರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿಗೆ ಧಾವಿಸಿದ ಪೊಲೀಸರು ಎಟಿಎಂ ಬಾಗಿಲು ಮುಚ್ಚಿಸಿ, ಬ್ಯಾಂಕ್ ಕಚೇರಿಗೆ ವಿಷಯ ತಿಳಿಸಿದ್ದಾರೆ ಎಂದು ಖಾಪರ್ಖೇಡಾ ಪೊಲೀಸ್ ಠಾಣೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.