ಭೋಪಾಲ್: ಉತ್ತರ ಪ್ರದೇಶದಲ್ಲಿ ಕನ್ವರ್ ಯಾತ್ರೆ ಸಾಗುವ ಮಾರ್ಗದ ಅಂಗಡಿಗಳಿಗೆ ಮಾಲೀಕರು ತಮ್ಮ ಹೆಸರನ್ನು ಪ್ರದರ್ಶಿಸುವಂತೆ ಸರ್ಕಾರ ಆದೇಶಿಸಿದ ರೀತಿಯಲ್ಲೇ ಮಧ್ಯಪ್ರದೇಶದಲ್ಲೂ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಶಾಸಕರೊಬ್ಬರು ಒತ್ತಾಯಿಸಿದ್ದಾರೆ.
ವ್ಯಾಪಾರಿಯ ಹೆಸರು, ಆತನ ಗುರುತನ್ನು ತಿಳಿದುಕೊಳ್ಳುವ ಹಕ್ಕು ಗ್ರಾಹಕರು ಹೊಂದಿದ್ದಾರೆ. ಮಧ್ಯಪ್ರದೇಶದಲ್ಲಿ ಇದನ್ನು ಕಡ್ಡಾಯಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಮುಖ್ಯಮಂತ್ರಿಗೆ ಶಾಸಕ ರಮೇಶ ಮೆಂಡೋಲಾ ಪತ್ರ ಬರೆದಿದ್ದಾರೆ.
ಮುಸ್ಲಿಂ ವ್ಯಾಪಾರಿಗಳನ್ನು ಗುರಿಯಾಗಿಸಿಕೊಂಡು ಕನ್ವರ್ ಯಾತ್ರೆಯ ಮಾರ್ಗದಲ್ಲಿರುವ ತಿನಿಸುಗಳ ಮಾಲೀಕರ ಹೆಸರನ್ನು ಪ್ರದರ್ಶಿಸಲು ಉತ್ತರ ಪ್ರದೇಶ ಸರ್ಕಾರ ಆದೇಶಿಸಿದ್ದು, ಇದಕ್ಕೆ ವಿರೋಧ ಪಕ್ಷಗಳಿಂದ ವ್ಯಾಪಕ ಟೀಕೆ ಎದುರಾಗಿದೆ. ಸರ್ಕಾರದ ಈ ಆದೇಶ ವಿವಾದಕ್ಕೀಡು ಮಾಡಿಕೊಟ್ಟಿರುವ ಬೆನ್ನಲ್ಲೇ ಶಾಸಕ ರಮೇಶ ಮೆಂಡೋಲಾ ಶನಿವಾರ ರಾಜ್ಯ ಸರ್ಕಾರವನ್ನು ಒತ್ತಾಯಿಸಿರುವುದು ಗಮನ ಸೆಳೆದಿದೆ.