Friday, 13th December 2024

Narendra Modi: ಕಾಂಗ್ರೆಸ್‌ ಎಂದರೆ ಭ್ರಷ್ಟಾಚಾರ, ಕೋಮುವಾದ; ಕೈ ಪಕ್ಷದ ವಿರುದ್ಧ ಪ್ರಧಾನಿ ಮೋದಿ ಗುಡುಗು

PM Narendra Modi

ಚಂಡೀಗಢ: ಅಕ್ಟೋಬರ್‌ 5ರಂದು ನಡೆಯಲಿರುವ ಹರಿಯಾಣ ವಿಧಾನಸಭಾ ಚುನಾವಣೆ (Haryana Assembly Elections 2024)ಯ ಬಹಿರಂಗ ಪ್ರಚಾರ ಅಂತ್ಯವಾಗಿದೆ. ಕೊನೆಯ ಕ್ಷಣದ ಕಸರತ್ತಿನಲ್ಲಿ ರಾಜಕೀಯ ಪಕ್ಷಗಳು ನಿರತವಾಗಿದ್ದು, ಗುರುವಾರ (ಅಕ್ಟೋಬರ್‌ 3) ಪ್ರಧಾನಿ ನರೆಂದ್ರ ಮೋದಿ (Narendra Modi) ಎಕ್ಸ್‌ (ಹಿಂದಿನ ಟ್ವಿಟರ್‌)ನಲ್ಲಿ ಸರಣಿ ಪೋಸ್ಟ್‌ ಮೂಲಕ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಚಾರ ಕೊನೆಗೊಳ್ಳಲಿರುವ 2 ಗಂಟೆ ಮೊದಲು ಅವರು ಕೈ ಪಕ್ಷದ ವಿರುದ್ಧ ಕಿಡಿಕಾರಿದ್ದು, ಕಾಂಗ್ರೆಸ್‌ ಭ್ರಷ್ಟಾಚಾರ, ಜಾತಿವಾದ, ಕೋಮುವಾದ ಮತ್ತು ಸ್ವಜನಪಕ್ಷಪಾತದ ಪರವಾಗಿ ನಿಂತಿದೆ ಎಂದು ಹೇಳಿದ್ದಾರೆ.

ಕೆಲವು ದಿನಗಳಿಂದ ಹರಿಯಾಣಾದ್ಯಂತ ಓಡಾಡಿದ್ದು, ಸಾರ್ವಜನಿಕರ ನಾಡಿಮಿಡಿತ ಅರಿತುಕೊಂಡಿದ್ದೇನೆ. ಮತದಾರರನ್ನು ಭೇಟಿಯಾದ ಬಳಿಕ ಬಿಜೆಪಿ ಮೂರನೇ ಬಾರಿಗೆ ಆಡಳಿತ ನಡೆಸಲಿದೆ ಎನ್ನುವ ವಿಶ್ವಾಸ ಮೂಡಿದೆ. ಮತದಾರರು ಖಂಡಿತವಾಗಿಯೂ ನಮ್ಮ ಕೈ ಹಿಡಿಯಲಿದ್ದಾರೆ ಎಂದು ಮೋದಿ ತಿಳಿಸಿದ್ದಾರೆ. 2014ರಿಂದ ಆಡಳಿತ ನಡೆಸುತ್ತಿರುವ ಬಿಜೆಪಿ ಹರಿಯಾಣದ ಸರ್ವಾಂಗೀಣ ಅಭಿವೃದ್ಧಿಗೆ ಪಣ ತೊಟ್ಟಿದೆ. ಎಲ್ಲ ವಿಭಾಗದ ಜನರ ಕ್ಷೇಮಾಭಿವೃದ್ದಿಗಾಗಿ ಶ್ರಮಿಸುತ್ತಿದೆ. ಹಿಮಾಚಲ ಪ್ರದೇಶ ಮತ್ತು ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ ಜನರ ಹಿತವನ್ನು ಕಡೆಗಣಿಸಿದೆ ಎಂದು ಪ್ರಧಾನಿ ದೂರಿದ್ದಾರೆ.

ಮೋದಿ ಹೇಳಿದ್ದೇನು?

ʼʼಕಾಂಗ್ರೆಸ್‌ ಇದ್ದಲ್ಲಿ ಭಷ್ಟಾಚಾರ, ಜಾತಿವಾದ, ಕೋಮುವಾದ ಮತ್ತು ಸ್ವಜನಪಕ್ಷಪಾತ ಗ್ಯಾರಂಟಿ ಎನ್ನುವುದು ಹರಿಯಾಣದ ಜನತೆ ಅರಿತುಕೊಂಡಿದ್ದಾರೆ. ಇಂದು ಹಿಮಾಚಲ ಪ್ರದೇಶ, ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಜನರು ನೋಡುತ್ತಿದ್ದಾರೆ. ಕಾಂಗ್ರೆಸ್‌ ನೀತಿಗಳು ಜನರ ಹಿತವನ್ನು ಕಡೆಗಣಿಸುತ್ತದೆ ಮತ್ತು ಅದಕ್ಕಾಗಿಯೇ ಹರಿಯಾಣದ ಜನರು ಕಾಂಗ್ರೆಸ್‌ ಅಧಿಕಾರಕ್ಕೆ ಬರದಂತೆ ತಡೆಯುತ್ತಾರೆʼʼ ಎಂದು ಮೋದಿ ಬರೆದುಕೊಂಡಿದ್ದಾರೆ.

ಮೋದಿ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಹೆಸರನ್ನು ಉಲ್ಲೇಖಿಸದೇ ಅವರ ವಿರುದ್ದ ವಾಗ್ದಾಳಿ ನಡೆದಿದ್ದಾರೆ. ʼʼಕಾಂಗ್ರೆಸ್ ನಾಯಕರು ಮೀಸಲಾತಿಯನ್ನು ಕೊನೆಗೊಳಿಸುವ ಬಗ್ಗೆ ಮಾತನಾಡಿದ್ದಾರೆʼʼ ಎಂದು ಮೋದಿ ಹೇಳಿದ್ದಾರೆ. ಕಳೆದ ತಿಂಗಳು ಅಮೆರಿಕಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ದೇಶದಲ್ಲಿ ಮೀಸಲಾತಿಯನ್ನು ಕೊನೆಗೊಳಿಸುವ ಬಗ್ಗೆ ಕಾಂಗ್ರೆಸ್ ಚಿಂತನೆ ನಡೆಸುತ್ತಿದೆ ಎಂದು ಹೇಳಿದ್ದರು. ಬಳಿಕ ಈ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಅವರು ಸಮರ್ಥಿಸಿಕೊಂಡಿದ್ದರು. ನಾನು ಮೀಸಲಾತಿ ವಿರೋಧಿಯಲ್ಲ, ಈಗ ಮೀಸಲಾತಿಗೆ ಶೇ. 50ರ ಮಿತಿಯಿದ್ದು, ಈ ಮಿತಿಯನ್ನು ಮೀರಿ ಮೀಸಲಾತಿ ಹೆಚ್ಚಿಸುವುದು ಕಾಂಗ್ರೆಸ್ ನ ಉದ್ದೇಶವಾಗಿದೆ ಎಂದು ಸ್ಪಷ್ಟೀಕರಣವನ್ನು ನೀಡಿದ್ದರು.

ಕಾಂಗ್ರೆಸ್ ಎಂದಿಗೂ ಭಾರತವನ್ನು ಬಲಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ ಪ್ರಧಾನಿ ಮೋದಿ, “ಇಂದು ಇಡೀ ವಿಶ್ವದ ಕಣ್ಣುಗಳು ಭಾರತದ ಮೇಲೆ ಇವೆ. ಜಗತ್ತು ಸಾಕಷ್ಟು ಭರವಸೆ ಮತ್ತು ನಿರೀಕ್ಷೆಯೊಂದಿಗೆ ಭಾರತದತ್ತ ನೋಡುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ ಹರಿಯಾಣದ ಜನರು ಭಾರತವನ್ನು ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಸರ್ಕಾರವನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ಕಾಂಗ್ರೆಸ್ ಎಂದಿಗೂ ದೇಶವನ್ನು ಬಲಪಡಿಸಲು ಸಾಧ್ಯವಿಲ್ಲ. ಆದ್ದರಿಂದ, ಹರಿಯಾಣದ ಮತದಾರರು ಮತ್ತೆ ಬಿಜೆಪಿಗೆ ಆಶೀರ್ವಾದ ಮಾಡಬೇಕೆಂದು ನಾನು ವಿನಂತಿಸುತ್ತೇನೆ” ಎಂದು ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: Dinesh Gundu Rao: ಸಾವರ್ಕರ್‌ ಗೋಹತ್ಯೆಯ ವಿರೋಧಿಯಾಗಿರಲಿಲ್ಲ; ಕಿಡಿ ಹೊತ್ತಿಸಿದ ದಿನೇಶ್ ಗುಂಡೂರಾವ್ ಹೇಳಿಕೆ: ಬಿಜೆಪಿ ನಾಯಕರು ಸಿಡಿಮಿಡಿ