Sunday, 13th October 2024

Narendra Modi: ಇಂದು ಶ್ರೀನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ರ‍್ಯಾಲಿ

Narendra Modi

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಮೊದಲ ಹಂತದ ಮತದಾನ(JK election) ಪೂರ್ಣಗೊಂಡ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ(Narendra Modi) ಇಂದು ಶ್ರೀನಗರದಲ್ಲಿ ಪ್ರಚಾರ ರ್ಯಾಲಿಯಲ್ಲಿ ಭಾಗಿಯಾಗಲಿದ್ದಾರೆ. ಶ್ರೀನಗರದಲ್ಲಿ ಇಂದು ನಡೆಯಲಿರುವ ರ‍್ಯಾಲಿ(Modi Rally)ಯಲ್ಲಿ ಸುಮಾರು 30ಸಾವಿರಕ್ಕೂ ಅಧಿಕ ಮಂದಿ ಭಾಗಿಯಾಗುವ ನಿರೀಕ್ಷೆ ಇದೆ ಎನ್ನಲಾಗಿದೆ.

ಇನ್ನು ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಪ್ರಧಾನಿ ಮೋದಿ, ನಾನು ಇಂದು ಜಮ್ಮು ಮತ್ತು ಕಾಶ್ಮೀರದ ಜನರ ನಡುವೆ ಇರಲು ಎದುರು ನೋಡುತ್ತಿದ್ದೇನೆ. ಶ್ರೀನಗರ ಮತ್ತು ಕತ್ರಾದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾನೆ. ನಿನ್ನೆಯ ಮತದಾನವು ಜಮ್ಮು ಕಾಶ್ಮೀರದ ಜನರಲ್ಲಿ ಚುನಾವಣೆಯ ಬಗ್ಗೆ ಬಹಳ ಉತ್ಸುಕತೆ ತುಂಬಿದೆ. ಚುನಾವಣಾ ಪ್ರಕ್ರಿಯೆಯನ್ನು ಮತ್ತಷ್ಟು ತೀವ್ರಗೊಳಿಸಲು ಉತ್ಸುಕರಾಗಿದ್ದಾರೆಂದು ತೋರಿಸಿದೆ. ನಾನು ನಮ್ಮ ಅಭಿವೃದ್ಧಿ ಕಾರ್ಯಸೂಚಿಯ ಬಗ್ಗೆ ಮಾತನಾಡುತ್ತೇನೆ ಮತ್ತು ಜನರ ಆಶೀರ್ವಾದವನ್ನು ಪಡೆಯುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಕಾಶ್ಮೀರದ 47 ಸ್ಥಾನಗಳ ಪೈಕಿ ಬಿಜೆಪಿ 19 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ, ಇದು ಒಟ್ಟು ಮೂರನೇ ಒಂದು ಭಾಗಕ್ಕಿಂತ ಕಡಿಮೆ ಮತ್ತು 2014 ರಲ್ಲಿ ನಡೆದ ಕಳೆದ ವಿಧಾನಸಭಾ ಚುನಾವಣೆಗಿಂತ ಕಡಿಮೆಯಾಗಿದೆ. ಶ್ರೀನಗರದ ಶೇರ್-ಎ-ಕಾಶ್ಮೀರ್ ಪಾರ್ಕ್‌ನಲ್ಲಿ ರ್ಯಾಲಿ ನಡೆಯಲಿದ್ದು, 30,000 ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಬಿಜೆಪಿ ತಿಳಿಸಿದೆ.

ಶ್ರೀನಗರ ಮತ್ತು ಕಾಶ್ಮೀರದಾದ್ಯಂತ ಭದ್ರತಾ ಪಡೆಗಳನ್ನು ಹೆಚ್ಚಿನ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಭದ್ರತಾ ಲೋಪವಾಗದಂತೆ ಖಚಿತಪಡಿಸಿಕೊಳ್ಳಲು ಸುಧಾರಿತ ಗಸ್ತು ಮತ್ತು ಹಲವಾರು ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆರ್ಟಿಕಲ್ 370 ರದ್ದತಿಯ ನಂತರ, ಮೂರು ಬಿಜೆಪಿ ಅಭ್ಯರ್ಥಿಗಳು ಸ್ಥಳೀಯ ಚುನಾವಣೆಯಲ್ಲಿ ಗೆದ್ದಿದ್ದಾರೆ. ಶ್ರೀನಗರ, ಪುಲ್ವಾಮಾ ಮತ್ತು ಕುಪ್ವಾರ ಜಿಲ್ಲೆಗಳಿಂದ ತಲಾ ಒಬ್ಬ ಬಿಜೆಪಿ ಅಭ್ಯರ್ಥಿ ಗೆಲ್ಲುವ ಮೂಲಕ ಪಕ್ಷದ ಭವಿಷ್ಯಕ್ಕೆ ನಾಂದಿ ಹಾಡಿತ್ತು. ಅಲ್ಲದೇ ಈ ಗೆಲುವು ಈ ಪ್ರದೇಶದಲ್ಲಿ ಪಕ್ಷವು ತನ್ನ ಭವಿಷ್ಯವನ್ನು ಸುಧಾರಿಸುವ ಭರವಸೆಯನ್ನು ನೀಡಿತು.

ಇದಕ್ಕೂ ಮೊದಲು, ಕಳೆದ ವಾರ ಪ್ರಧಾನಿ ಮೋದಿ ಅವರು ಜಮ್ಮು ಪ್ರದೇಶದ ದೋಡಾದಲ್ಲಿ ರ್ಯಾಲಿ ನಡೆಸಿದರು, ಇದು 42 ವರ್ಷಗಳ ನಂತರ ಈ ಪ್ರದೇಶಕ್ಕೆ ಪ್ರಧಾನಿಯೊಬ್ಬರ ಮೊದಲ ಭೇಟಿಯಾಗಿತ್ತು. ಇನ್ನು ನಿನ್ನೆ ಮೊದಲ ಹಂತದ ಮತದಾನ ನಡೆದಿದ್ದು, ಒಟ್ಟು ಶೇ.59ರಷ್ಟು ವೋಟಿಂಗ್‌ ನಡೆದಿತ್ತು.

ಈ ಸುದ್ದಿಯನ್ನೂ ಓದಿ: JK election: ಕಣಿವೆ ರಾಜ್ಯದಲ್ಲಿ ಮೊದಲ ಹಂತದ ಮತದಾನ ಪೂರ್ಣ; ಶೇ.58.85ರಷ್ಟು ವೋಟಿಂಗ್‌