Saturday, 14th December 2024

ಬಿಜೆಪಿಗೆ ರಾಷ್ಟ್ರವೇ ಮುಖ್ಯ, ವ್ಯಕ್ತಿ ಅಲ್ಲ: 41ನೇ ಸ್ಥಾಪನಾ ದಿವಸ್ ಕಾರ್ಯಕ್ರಮದಲ್ಲಿ ಮೋದಿ

ನವದೆಹಲಿ : ಭಾರತೀಯ ಜನತಾ ಪಕ್ಷವು ರಾಷ್ಟ್ರಕ್ಕಾಗಿ ಕೆಲಸ ಮಾಡುತ್ತದೆ. ಪಕ್ಷದ ಸಿದ್ಧಾಂತ ಹೊರತಾಗಿ ಎಂದಿಗೂ ಬಿಜೆಪಿ ಇರಲಿಲ್ಲ. ಬಿಜೆಪಿಗೆ ರಾಷ್ಟ್ರವೇ ಮುಖ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.

ಪಕ್ಷದ 41ನೇ ಸ್ಥಾಪನಾ ದಿವಸ್ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ನಮ್ಮ ಪಕ್ಷಕ್ಕೆ ರಾಷ್ಟ್ರ ಮುಖ್ಯ, ವ್ಯಕ್ತಿಗಿಂತ ರಾಷ್ಟ್ರವೇ ದೊಡ್ಡದು ಎಂದು ತಮ್ಮ ಪಕ್ಷದ ಮೂಲ ಮಂತ್ರ ‘ನೇಷನ್ ಫಸ್ಟ್’ ನನ್ನು ಪ್ರತಿಪಾದಿಸಿದ್ದಾರೆ. ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಕಾಲದಿಂದ, ಇಂದಿನ ತನಕವೂ ಅದೇ ಮೂಲ ಧ್ಯೆಯದೊಂದಿಗೆ ಪಕ್ಷ ಕಾರ್ಯ ನಿರ್ವಹಿಸುತ್ತಿದೆ ಎಂದರು.

ವಿಪಕ್ಷಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಪ್ರಧಾನಿ ಮೋದಿ, ಕೇಂದ್ರದ ಸಾರ್ವಜನಿಕ ಕಲ್ಯಾಣ ನೀತಿಗಳು ಮತ್ತು ನಿರ್ಧಾರಗಳಿಗೆ ಸಂಬಂಧಿಸಿದಂತೆ ಗೊಂದಲ ಸೃಷ್ಟಿಸಲು ಮತ್ತು ನಾಗರಿಕರನ್ನು ದಾರಿ ತಪ್ಪಿಸಲು ವಿಪಕ್ಷಗಳು ಪ್ರಯತ್ನಿಸುತ್ತಿವೆ. ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೃಷಿ ಕಾನೂನುಗಳು, ಸಿಎಎ ವಿಚಾರದಲ್ಲಿ ಸುಳ್ಳು ಸುದ್ದಿಗಳನ್ನು ಹರಡುವುದರ ಮೂಲಕ ರಾಜಕೀಯ ಅಸ್ಥಿರತೆ ಸೃಷ್ಟಿಸುವ ಗುರಿಯನ್ನು ಪ್ರತಿಪಕ್ಷಗಳು ಹೊಂದಿವೆ. ಬಿಜೆಪಿ ಕಾರ್ಯಕರ್ತರು ಜನರಿಗೆ ಅರಿವು ಮೂಡಿಸುವ ಅಗತ್ಯವಿದೆ “ಎಂದು ಹೇಳಿದ್ದಾರೆ.

ಇನ್ನು, ಪಕ್ಷವನ್ನು ರೂಪಿಸುವಲ್ಲಿ ಮತ್ತು ವಿಸ್ತರಿಸುವಲ್ಲಿ ಪ್ರಮುಖರಾದ ಲಾಲ್ ಕೃಷ್ಣ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಅವರ ಕೊಡುಗೆಯನ್ನು ಪ್ರಧಾನಿ ಮೋದಿ ಶ್ಲಾಘಿಸಿದರು. 370ನೇ ವಿಧಿಯನ್ನು ರದ್ದುಪಡಿಸಿ ಮತ್ತು ಕಾಶ್ಮೀರಕ್ಕೆ ಸಾಂವಿಧಾ ನಿಕ ಹಕ್ಕನ್ನು ನೀಡುವ ಮೂಲಕ ನಮ್ಮ ಸರ್ಕಾರ ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಕಂಡ ಕನಸನ್ನು ಈಡೇರಿಸಿದೆ ಎಂದು ಅಭಿಪ್ರಾಯಪಟ್ಟರು.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily