Wednesday, 11th December 2024

ಮೃತ ರೈತನ ಮೇಲೆ ರಾಷ್ಟ್ರಧ್ವಜ ಹೊದಿಕೆ: ಕುಟುಂಬಸ್ಥರ ವಿರುದ್ಧ ಕೇಸ್‌

ಫಿಲಿಬಿಟ್: ಅಪಘಾತದಲ್ಲಿ ಮೃತ ರೈತನ ಮೇಲೆ ರಾಷ್ಟ್ರಧ್ವಜ ಹೊದಿಸಿ ಅಪಮಾನ ಮಾಡಿದ ಹಿನ್ನೆಲೆಯಲ್ಲಿ ಆತನ ಕುಟುಂಬಸ್ಥರ ವಿರುದ್ಧ ಪ್ರಕರಣ ದಾಖಲಾಗಿದೆ.

ಕೃಷಿ ಮಸೂದೆ ವಿರೋಧಿಸಿ ಘಾಜಿಪುರದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ರಸ್ತೆ ಅಪಘಾತದಲ್ಲಿ ರೈತ ಮೃತಪಟ್ಟಿದ್ದರು. ಸಾವನ್ನಪ್ಪಿದ ರೈತನ ಅಂತಿಮ ಸಂಸ್ಕಾರದ ವೇಳೆ ಮೃತದೇಹದ ಮೇಲೆ ರಾಷ್ಟ್ರಧ್ವಜ ಹೊದಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಮೃತ ರೈತನ ತಾಯಿ, ಸಹೋದರ ಹಾಗೂ ಮತ್ತೊಬ್ಬ ವ್ಯಕ್ತಿ ವಿರುದ್ಧ ಎಫ್‌ಐಆರ್ ದಾಖಲು ಮಾಡಿಕೊಂಡಿದ್ದಾರೆಂದು ವರದಿಯಾಗಿದೆ.

ಜ.23 ರಂದು ಬರಿ ಬುಜಿಯಾ ಗ್ರಾಮದ ಸೆಹ್ರಾಮೌ ಪ್ರದೇಶದ ನಿವಾಸಿ ಬಲ್ಜೀಂದ್ರ ಎಂಬ ರೈತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಘಾಜಿಪುರಕ್ಕೆ ತೆರಳು ತ್ತಿದ್ದ. ಜ.25 ರಂದು ದೆಹಲಿ-ಉತ್ತರಪ್ರದೇಶ ಗಡಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದ.

ಕೇಂದ್ರ ಸರ್ಕಾರದ ಕೃಷಿ ಮಸೂದೆಯನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ ಕಳೆದ ನವೆಂಬರ್ ತಿಂಗಳಿನಿಂದಲೂ ರೈತರು ತೀವ್ರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ ಮಾತ್ರ ಮಸೂದೆ ರೈತರ ಅಭಿವೃದ್ಧಿಗಾಗಿ ಆಗಿದೆ ಎಂದು ಸಮರ್ಥಿಸಿಕೊಳ್ಳುತ್ತಲೇ ಬರುತ್ತಿದೆ.