Wednesday, 11th December 2024

ಡಿಸೆಂಬರ್‌’ನಲ್ಲಿ ಎಲ್ಲಾ ರಾ.ಹೆದ್ದಾರಿ ಗುಂಡಿ ಮುಕ್ತ: ನಿತಿನ್ ಗಡ್ಕರಿ

ವದೆಹಲಿ: ಡಿಸೆಂಬರ್(2023ರ) ವೇಳೆಗೆ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳನ್ನು ಗುಂಡಿ ಮುಕ್ತ ಮಾಡುವ ಮಹತ್ವಾಕಾಂಕ್ಷೆಯ ಗುರಿ ಹೊಂದಿರುವುದಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಗುಂಡಿ ಮುಕ್ತ ರಾಷ್ಟ್ರೀಯ ಹೆದ್ದಾರಿಗಳನ್ನು ಖಚಿತಪಡಿಸಿಕೊಳ್ಳಲು ನೀತಿಯನ್ನು ರಚಿಸಲಾಗುತ್ತಿದೆ ಎಂದು ಹೇಳಿದರು. ಗುರಿ ತಲುಪಲು ಮತ್ತು ಯೋಜನೆಯನ್ನು ಯಶಸ್ವಿಗೊಳಿಸಲು ಯುವ ಎಂಜಿನಿಯರ್‌ಗಳನ್ನು ನಿಯೋಜಿಸಲಾಗುವುದು ಎಂದು ಹೇಳಿದರು.

ಹೊಸ ನೀತಿಯು ರಾಷ್ಟ್ರೀಯ ಹೆದ್ದಾರಿಗಳ ಉದ್ದಕ್ಕೂ ಇರುವ ಒಳಚರಂಡಿ ಸಮಸ್ಯೆಗಳನ್ನು ಸಹ ಪರಿಶೀಲಿ ಸುತ್ತದೆ. ರಸ್ತೆ ನಿರ್ಮಾಣದಲ್ಲಿ ಪುರಸಭೆಯ ತ್ಯಾಜ್ಯ ಬಳಸಲು ಮತ್ತೊಂದು ನೀತಿಯನ್ನು ರೂಪಿಸಲಾಗುತ್ತಿದೆ ಎಂದು ಹೇಳಿದರು.

ದೆಹಲಿ ಮುಂಬೈ ಎಕ್ಸ್‌ಪ್ರೆಸ್‌ವೇಯ UER-II, DND-ಸೋಹ್ನಾ ಸ್ಪರ್ ಮತ್ತು ಅಹಮದಾಬಾದ್‌ನಿಂದ ಧೋಲೇರಾ ಎಕ್ಸ್‌ಪ್ರೆಸ್‌ವೇ ನಿರ್ಮಾಣದಲ್ಲಿ ನಗರ ಘನತ್ಯಾಜ್ಯವನ್ನು ಬಳಸಲಾಗುತ್ತಿದೆ ಎಂದು ಸಚಿವಾಲಯ ಈ ಹಿಂದೆ ಹೇಳಿತ್ತು.

ಪರ್ಯಾಯ ಇಂಧನ ಬಳಸಿಕೊಂಡು ನಿರ್ಮಾಣ ಯಂತ್ರಗಳನ್ನು ಪ್ರೋತ್ಸಾಹಿಸುವ ನೀತಿಯ ಕರಡನ್ನು ಸಿದ್ಧಪಡಿಸಲಾಗಿದೆ ಮತ್ತು ಅನುಮೋದನೆಗಾಗಿ ಶೀಘ್ರದಲ್ಲೇ ಹಣಕಾಸು ಸಚಿವಾಲಯದೊಂದಿಗೆ ಹಂಚಿಕೊಳ್ಳಲಾಗುವುದು ಎಂದು ಗಡ್ಕರಿ ಹೇಳಿದರು.