ನವದೆಹಲಿ: ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ವಿವಾಹಿತ ಪುರುಷರ ಆತ್ಮಹತ್ಯೆ ತಡೆಯಲು ಮಾರ್ಗಸೂಚಿ ರೂಪಿಸಬೇಕು ಮತ್ತು ರಾಷ್ಟ್ರೀಯ ಪುರುಷರ ಆಯೋಗ ರಚಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.
ವಕೀಲ ಮಹೇಶ್ ಕುಮಾರ್ ತಿವಾರಿ ಅವರು ಸಲ್ಲಿಸಿರುವ ಅರ್ಜಿಯಲ್ಲಿ 2021ರಲ್ಲಿ ಆಕಸ್ಮಿಕ ಸಾವುಗಳ ಕುರಿತು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಪ್ರಕಟಿಸಿದ ವರದಿ ಉಲ್ಲೇಖಿಸಿ ದ್ದಾರೆ.
ಆ ವರ್ಷದಲ್ಲಿ ದೇಶಾದ್ಯಂತ 1,64,033 ಜನರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದರಲ್ಲಿ 81,063 ಜನರು ವಿವಾಹಿತ ಪುರುಷರು. 28,680 ಮಂದಿ ಮಾತ್ರ ವಿವಾಹಿತ ಮಹಿಳೆಯರು ಎಂದು ಅವರು ತಮ್ಮ ಅರ್ಜಿಯಲ್ಲಿ ಅಂಕಿ-ಅಂಶ ಉಲ್ಲೇಖಿಸಿ ವಾದಿಸಿದ್ದಾರೆ.
ವಿವಾಹಿತ ಪುರುಷರ ಆತ್ಮಹತ್ಯೆ ತಡೆಗೆ ಮತ್ತು ಕೌಟುಂಬಿಕ ಹಿಂಸಾಚಾರದಿಂದ ನಲುಗುತ್ತಿರುವ ಪುರುಷರ ದೂರುಗಳನ್ನು ಸ್ವೀಕರಿಸಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ರಚಿಸಲು ನಿರ್ದೇಶಿಸುವಂತೆ ಅರ್ಜಿದಾರರು ಸುಪ್ರೀಂ ಕೋರ್ಟ್ ಕೋರಿದ್ದಾರೆ.