Wednesday, 11th December 2024

Navaratri 2024: ಭಕ್ತರು ಬೇಡಿದ್ದನ್ನು ಕರುಣಿಸುವ ಕಾಳರಾತ್ರಿ ದೇವಿಯ ಮಹತ್ವ, ಪೂಜೆಯ ಮಾಹಿತಿ ಹೀಗಿದೆ

Navaratri 2024

ನವರಾತ್ರಿ ದಿನ ಪಾರ್ವತಿ ದೇವಿಯ ಒಂಬತ್ತು ಅವತಾರಗಳನ್ನು ಪೂಜಿಸಲಾಗುತ್ತದೆ. ಹಾಗಾಗಿ ನವರಾತ್ರಿಯ ಒಂಬತ್ತು ದಿನಗಳು ಕೂಡ ಬಹಳ ಶುಭ ದಿನವೇ ಎಂದು ಹೇಳಬಹುದು. ನವರಾತ್ರಿಗಳಲ್ಲಿ ಪಾರ್ವತಿ ದೇವಿಯನ್ನು ಶೈಲಪುತ್ರಿ,  ಬ್ರಹ್ಮಚಾರಿಣಿ,  ಚಂದ್ರಘಂಟಾ,  ಕೂಷ್ಮಾಂಡ,  ಸ್ಕಂದಮಾತಾ,  ಕಾತ್ಯಾಯಿನಿ,  ಕಾಳರಾತ್ರಿ,  ಮಹಾಗೌರಿ ಮತ್ತು  ಸಿದ್ಧಿಧಾತ್ರಿ ಹೀಗೆ ಒಂಭತ್ತು ರೂಪಗಳಲ್ಲಿ ಪೂಜಿಸಲಾಗುತ್ತದೆ. ಈ ವರ್ಷ ಅಕ್ಟೋಬರ್ 3ರಿಂದ ನವರಾತ್ರಿ (Navaratri 2024) ಆರಂಭವಾಗಿದೆ. ಇದೀಗ ನವರಾತ್ರಿಯ ಏಳನೇ ದಿನದಂದು ಕಾಳರಾತ್ರಿ ದೇವಿಯನ್ನು ಪೂಜಿಸಿ. ಹಾಗೇ ಆಕೆ  ಯಾರು? ಆಕೆಯ ಮಹತ್ವ ಮತ್ತು ಪೂಜಾ ವಿಧಾನಗಳ ಬಗ್ಗೆ ತಿಳಿದುಕೊಳ್ಳಿ.

Navaratri 2024

ದೇವಿ  ಕಾಳರಾತ್ರಿ ಯಾರು? ಆಕೆಯ  ಮಹತ್ವ ತಿಳಿಯಿರಿ:

ನವರಾತ್ರಿಯ ಸಪ್ತಮಿ ತಿಥಿಯಂದು ಪೂಜಿಸುವ ದುರ್ಗಾ ಮಾತೆಯ ಒಂಬತ್ತು ಅವತಾರಗಳಲ್ಲಿ ದೇವಿ ಕಾಳರಾತ್ರಿ ಅವತಾರ ಕೂಡ ಒಂದಾಗಿದೆ. ದೇವಿ ಕಾಳರಾತ್ರಿ ಪಾರ್ವತಿ ದೇವಿಯ ಉಗ್ರ ರೂಪವಾಗಿದೆ. ನಂಬಿಕೆಗಳ ಪ್ರಕಾರ, ದೇವಿಯು ಶನಿಯನ್ನು ಆಳುತ್ತಾಳೆ. ಅವಳು ಕಪ್ಪು ಮೈಬಣ್ಣ, ನಾಲ್ಕು ಕೈಗಳನ್ನು ಹೊಂದಿದ್ದು, ಅವಳ ಬಲಗೈಗಳಲ್ಲಿ ಅಭಯ ಮತ್ತು ವರದ ಮುದ್ರೆಯನ್ನು ಮತ್ತು ಅವಳ ಎಡಗೈಗಳಲ್ಲಿ ಖಡ್ಗ ಮತ್ತು ಮಾರಕ ಕಬ್ಬಿಣದ ಉಪಕರಣವನ್ನು ಹಿಡಿದಿದ್ದಾಳೆ. ಇವಳು ಕತ್ತೆಯನ್ನು ಏರಿ ಬರುತ್ತಾಳೆ.

ಕಾಳರಾತ್ರಿ ದೇವಿಯು ಪಾರ್ವತಿ ದೇವಿಯ ಅತ್ಯಂತ ಉಗ್ರ ರೂಪವಾಗಿದ್ದರೂ, ಅವಳು ತನ್ನ ಭಕ್ತರಿಗೆ ಅವರು ಬಯಸಿದ್ದನ್ನು ಕರುಣಿಸುತ್ತಾಳೆ ಮತ್ತು ಅವರ ಜೀವನದಲ್ಲಿ ಎದುರಾದ ಅಡೆತಡೆಗಳು ಮತ್ತು ದುಃಖಗಳನ್ನು ತೆಗೆದುಹಾಕುತ್ತಾಳೆ. ಕಾಳರಾತ್ರಿ ದೇವಿಯು ತನ್ನ ಭಕ್ತರನ್ನು ಎಲ್ಲಾ ದುಷ್ಟತನದಿಂದ ರಕ್ಷಿಸುತ್ತಾಳೆ ಎಂದು ನಂಬಲಾಗಿದೆ. ತನ್ನ ಮಂಗಳಕರ ಶಕ್ತಿಯಿಂದಾಗಿ, ಕಾಳರಾತ್ರಿ ದೇವಿಯನ್ನು ಶುಭಂಕರಿ ದೇವಿ ಎಂದೂ ಕರೆಯಲಾಗುತ್ತದೆ. ಅವಳ ಇತರ ಹೆಸರುಗಳು ಮಹಾಯೋಗೇಶ್ವರಿ ದೇವಿ ಮತ್ತು ಮಹಾಯೋಗಿನಿ ದೇವಿ. ಕಾಳರಾತ್ರಿಯನ್ನು ಪೂಜಿಸುವುದರಿಂದ ಜೀವನದಲ್ಲಿ ಗ್ರಹಗಳ ದೋಷಗಳು ನಿವಾರಣೆಯಾಗಿ  ಸಂತೋಷ ಪ್ರಾಪ್ತಿಯಾಗುತ್ತದೆ.

ದಂತಕಥೆಗಳ ಪ್ರಕಾರ, ಕಾಳರಾತ್ರಿ ದೇವಿಯು ಚಂಡಾ-ಮುಂಡಾ ಮತ್ತು ರಕ್ತಬೀಜ ಎಂಬ ರಾಕ್ಷಸರನ್ನು ಸಂಹರಿಸಿದ್ದಾಳೆ. ಶುಂಭ ಮತ್ತು ನಿಶುಂಭ ಎಂಬ ರಾಕ್ಷಸರು ಚಂಡಾ-ಮುಂಡಾ ಮತ್ತು ರಕ್ತಬೀಜ ಎಂಬ ರಾಕ್ಷಸರ ಸಹಾಯದಿಂದ ದೇವತೆಗಳನ್ನು ಸೋಲಿಸಿ ಮೂರು ಲೋಕಗಳನ್ನು ಆಳಲು ಪ್ರಾರಂಭಿಸಿದ್ದರು. ಆಗ ಇಂದ್ರ ಮತ್ತು ಇತರ ದೇವತೆಗಳು ಪಾರ್ವತಿ ದೇವಿಯನ್ನು ಪ್ರಾರ್ಥಿಸಿದ್ದಾರೆ. ಆಗ ಪಾರ್ವತಿಯು  ಅವರನ್ನು ಕೊಲ್ಲಲು ಚಂಡಿ ದೇವಿಯನ್ನು ಸೃಷ್ಟಿಸಿದ್ದಾಳೆ. ಆದರೆ ಚಂಡಾ-ಮುಂಡಾ ಮತ್ತು ರಕ್ತಬೀಜಾಸುರ ರಾಕ್ಷರನ್ನು ತನಗೆ ಕೊಲ್ಲಲು ಸಾಧ್ಯವಾಗದಿದ್ದಾಗ ದೇವಿ  ಚಂಡಿ ತನ್ನ ಹಣೆಯಿಂದ ದೇವಿ ಕಾಳರಾತ್ರಿಯನ್ನು ಸೃಷ್ಟಿಸಿದ್ದಾಳೆ.

ಆಗ ಕಾಳರಾತ್ರಿ ದೇವಿಯು ಚಂಡಾ ಮತ್ತು ಮುಂಡಾರನ್ನು ಸಂಹರಿಸಿದ್ದಳು  ಆದರೆ ರಕ್ತಬೀಜನನ್ನು ಸೋಲಿಸುವುದು ಅವಳಿಗೆ ಕಷ್ಟಕರವಾಯಿತು. ಯಾಕೆಂದರೆ ನೆಲದ ಮೇಲೆ ಬಿದ್ದ ಅವನ ಪ್ರತಿ ಹನಿ ರಕ್ತವು ಅವನಂತೆಯೇ ಹೋಲುವ ಇನ್ನೊಬ್ಬ ರಾಕ್ಷಸನನ್ನು  ಸೃಷ್ಟಿಸುತ್ತದೆ ಎಂದು ಬ್ರಹ್ಮ ದೇವರಿಂದ ಅವನಿಗೆ ವರವಿತ್ತು. ಇದರಿಂದ ವಿಚಲಿತರಾಗದ ದೇವಿ ಕಾಳರಾತ್ರಿ ರಕ್ತಬೀಜಾಸುರನ ಒಂದು ಹನಿ ಕೂಡ ರಕ್ತ ಕೆಳಗೆ ಬೀಳದಂತೆ ಆತನನ್ನು ತಿಂದು ಹಾಕಿದ್ದಾಳೆ.  ಅಂತಿಮವಾಗಿ ಅವಳು ಅವನನ್ನು ಸಂಹರಿಸಿದ್ದಾಳೆ.

ನವರಾತ್ರಿಯ 7ನೇ ದಿನದ ಪೂಜೆ ಮತ್ತು ಆಚರಣೆಗಳು:

ನವರಾತ್ರಿಯ 7ನೇ ದಿನದಂದು ದೇವಿ ಕಾಳರಾತ್ರಿಯನ್ನು ಪೂಜಿಸಲು, ಭಕ್ತರು ಬೆಲ್ಲದಿಂದ ಮಾಡಿದ ಪಾಯಸ ಅಥವಾ ಪ್ರಸಾದವನ್ನು ಅರ್ಪಿಸಬೇಕು. ಸಪ್ತಮಿಯಂದು ರಾತ್ರಿ ಅವರು ಶೃಂಗಾರ ಪೂಜೆಯನ್ನು ಮಾಡಬೇಕು. ಅಂದರೆ ಅದರಲ್ಲಿ ಅವರು ಸಿಂಧೂರ, ಕಾಜಲ್, ಬಾಚಣಿಗೆ, ಹೇರ್ ಆಯಿಲ್, ಶಾಂಪೂ, ನೈಲ್ ಪಾಲಿಶ‍್, ಲಿಪ್ಸ್ಟಿಕ್ ಮತ್ತು ಸಾಮಾನ್ಯವಾಗಿ ಮೇಕಪ್‍ನಲ್ಲಿ ಬಳಸುವ ಎಲ್ಲಾ ಉತ್ಪನ್ನಗಳ ಎರಡು ಸೆಟ್‍ಗಳನ್ನು ಅರ್ಪಿಸುತ್ತಾರೆ. ಉತ್ಪನ್ನಗಳ ಒಂದು ಸೆಟ್ ಅನ್ನು ನಂತರ ದೇವಾಲಯಗಳಿಗೆ ದಾನ ಮಾಡಲಾಗುತ್ತದೆ. ಆದರೆ ಭಕ್ತರು ಮತ್ತೊಂದು ಸೆಟ್ ಅನ್ನು ತಮಗಾಗಿ ಪ್ರಸಾದದ ರೂಪದಲ್ಲಿ ಬಳಸುತ್ತಾರೆ.

ಇದನ್ನೂ ಓದಿ:ದುಷ್ಟಶಕ್ತಿಯ ಕಾಟ ನಿವಾರಿಸುತ್ತಾಳಂತೆ ಕಾತ್ಯಾಯಿನಿ ದೇವಿ

ಈ ರೀತಿಯಲ್ಲಿ ಕಾಳರಾತ್ರಿ ದೇವಿಯ ಬಗ್ಗೆ ಹಾಗೂ ಆಕೆಯನ್ನು ಪೂಜಿಸುವ ವಿಧಾನವನ್ನು  ತಿಳಿದುಕೊಂಡು ನವರಾತ್ರಿಯ 7ನೇ ದಿನ ಕಾಳರಾತ್ರಿ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಿದರೆ ಜೀವನದಲ್ಲಿ ಎದುರಾದ ಸಮಸ್ಯೆಗಳು ನಿವಾರಣೆಯಾಗುತ್ತದೆ ಮತ್ತು ನಿಮ್ಮಲ್ಲಿರುವ ದುಷ್ಟ ಗುಣಗಳು ನಿವಾರಣೆಯಾಗಿ ಒಬ್ಬ ಒಳ್ಳೆಯ ವ್ಯಕ್ತಿ ಎನಿಸಿಕೊಳ್ಳುತ್ತೀರಿ