Friday, 13th December 2024

ಎನ್‌ಕೌಂಟರ್‌’ನಲ್ಲಿ ನಟೋರಿಯಸ್ ನಕ್ಸಲ್ ನಾಯಕ ‘ಕೋಸಾ’ ಹತ್ಯೆ

ದಂತೇವಾಡ(ಛತ್ತೀಸ್ ಘಡ): ಮೋಸ್ಟ್ ನಟೋರಿಯಸ್ ನಕ್ಸಲ್ ನಾಯಕ ‘ಕೋಸಾ’ ಎಂಬಾತನನ್ನು ಭದ್ರತಾ ಪಡೆಗಳು ಮಂಗಳವಾರ ಎನ್ಕೌಂಟರ್ ನಲ್ಲಿ ಹತ್ಯೆ ಮಾಡಿವೆ.

ಮಂಗಳವಾರ ಛತ್ತೀಸ್ ಘಡದ ನೀಲವಾಯಾ ಅರಣ್ಯದಲ್ಲಿ ದಂತೇವಾಡ ಜಿಲ್ಲಾ ಮೀಸಲು ಪಡೆ ಕಾರ್ಯಾಚರಣೆ ನಡೆಸಿ ಎನ್ಕೌಂಟರ್ ನಡೆಸಿದ್ದು, ಕಾರ್ಯಾಚರಣೆಯಲ್ಲಿ ಛತ್ತೀಸ್ ಘಡದ ಮೋಸ್ಟ್ ನಟೋರಿಯಸ್ ನಕ್ಸಲ್ ನಾಯಕ ‘ಕೋಸಾ’ ಹತನಾಗಿ ದ್ದಾನೆ ಎಂದು ತಿಳಿದುಬಂದಿದೆ.

ದಂತೇವಾಡ ಎಸ್‌ಪಿ, ದಂತೇವಾಡ ಡಿಸ್ಟಿಕ್ಟ್ ರಿಸರ್ವ್ ಗಾರ್ಡ್ಯೊಂದಿಗೆ ನೀಲ ವಾಯದ ಕಾಡಿನಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಮಾವೋವಾದಿ ಮೃತ ದೇಹವನ್ನು ವಶಪಡಿಸಿಕೊಳ್ಳಲಾಗಿತ್ತು. ಮೃತನನ್ನು ನಟೋರಿಯಸ್ ನಕ್ಸಲ್ ನಾಯಕ ಕೋಸಾ ಎಂದು ಗುರುತಿಸಲಾಗಿದೆ.  ಮೂಲತಃ ನೀಲವಾಯದ ಮಲ್ಲಪಾರ ನಿವಾಸಿಯಾಗಿದ್ದ ಕೋಸಾ ಪ್ರಸ್ತುತ ಮಲಂಗೀರ್ ಪ್ರದೇಶ ಸಮಿತಿ ಸದಸ್ಯನಾಗಿದ್ದ ಮತ್ತು ಮಿಲಿಟರಿ ಗುಪ್ತಚರ ಉಸ್ತುವಾರಿ ವಹಿಸಿದ್ದ. ಈತನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ 15 ಕ್ಕೂ ಹೆಚ್ಚು ಅಪರಾಧಗಳು ದಾಖಲಾಗಿದ್ದವು. ಈತನ ಕುರಿತು ಮಾಹಿತಿ ನೀಡಿದವರಿಗೆ 5 ಲಕ್ಷ ರೂ ಬಹುಮಾನ ನೀಡುವುದಾಗಿ ಇಲಾಖೆ ಘೋಷಣೆ ಮಾಡಿತ್ತು ಎಂದು ಹೇಳಿದ್ದಾರೆ.

ಘಟನಾ ಸ್ಥಳದಲ್ಲಿ ಒಂದು 9 ಎಂಎಂ ಪಿಸ್ತೂಲ್, ಒಂದು ದೇಶೀ ನಿರ್ಮಿತ ಭರ್ಮಾರ್, 3 ಕೆಜಿ ಐಇಡಿ ಸ್ಫೋಟಕ, ಪಿಥೂಸ್, ಔಷಧಿಗಳು ಮತ್ತು ದೈನಂದಿನ ಬಳಕೆಯ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಏಪ್ರಿಲ್ ತಿಂಗಳ ಆರಂಭದಲ್ಲಿ ಛತ್ತೀಸ್ ಘಡದ ಸುಕ್ಮಾ ಮತ್ತು ಬಿಜಾಪುರ್ ನಡುವಿನ ಜುನಾಗಡದಲ್ಲಿ ನಕ್ಸಲರು ನಡೆಸಿದ್ದ ಭೀಕರ ದಾಳಿಯಲ್ಲಿ 22 ಯೋಧರು ಹುತಾತ್ಮರಾಗಿದ್ದರು. ಈ ದಾಳಿ ಬೆನ್ನಲ್ಲೇ ಭದ್ರತಾ ಪಡೆಗಳು ನಕ್ಸಲ್ ನಿಗ್ರಹ ಕಾರ್ಯಾಚರಣೆಯನ್ನು ತೀವ್ರಗೊಳಿಸಿತ್ತು.