Wednesday, 11th December 2024

ಎನ್‌ಕೌಂಟರ್‌ನಲ್ಲಿ ಓರ್ವ ಮಹಿಳಾ ನಕ್ಸಲ್‌ ಸಾವು

ಬಿಜಾಪುರ (ಛತ್ತೀಸ್‌ಗಢ): ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ಅರಣ್ಯದಲ್ಲಿ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಓರ್ವ ಮಹಿಳಾ ನಕ್ಸಲ್‌ ಮೃತಪಟ್ಟಿದ್ದಾರೆ.

ಗಂಗಾಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊರ್ಚೋಳಿ ಮತ್ತು ತೊಡ್ಕಾ ನಡುವಿನ ಅರಣ್ಯದಲ್ಲಿ ಬೆಳಗ್ಗೆ ಎನ್‌ಕೌಂಟರ್ ನಡೆದಿದೆ.

ಕಾರ್ಯಾಚರಣೆಯನ್ನು ಬಿಜಾಪುರ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ) ಮತ್ತು ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಪ್ರಾರಂಭಿಸಿತು. ನಂತರ ನಕ್ಸಲ್ ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯಿತು.

ಕಾರ್ಯಾಚರಣೆಯ ಸಮಯ, ನಕ್ಸಲ್ ಸಮವಸ್ತ್ರದಲ್ಲಿದ್ದ ಮಹಿಳೆಯ ಹತ್ಯೆಯಾಗಿದೆ. ಆಕೆಯ ದೇಹವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತಳ ಬಳಿಯಿದ್ದ 12 ಬೋರ್ ರೈಫಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಎಲ್ಲಾ ಭದ್ರತಾ ಸಿಬ್ಬಂದಿ ಸುರಕ್ಷಿತವಾಗಿದ್ದು, ಡಿಆರ್‌ಜಿ, ಎಸ್‌ಟಿಎಫ್ ಮತ್ತು ಸಿಆರ್‌ಪಿಎಫ್ ಪಡೆಗಳಿಂದ ಹತ್ತಿರದ ಪ್ರದೇಶಗಳಲ್ಲಿ ಹೆಚ್ಚಿನ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.