Wednesday, 11th December 2024

ಛತ್ತೀಸ್‌ಗಢದಲ್ಲಿ ಇಬ್ಬರು ಮಹಿಳಾ ನಕ್ಸಲರ ಸಾವು

ರಾಯ್‌ಪುರ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ಮಹಿಳಾ ನಕ್ಸಲರು ಹತರಾಗಿದ್ದಾರೆ.

ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳ ಜಂಟಿ ತಂಡವು ನೈಮೇದ್ ಪೊಲೀಸ್ ಠಾಣೆ ವ್ಯಾಪ್ತಿಯ ಜಬೇಲಿ ಗ್ರಾಮದ ಬಳಿಯ ಅರಣ್ಯ ದಲ್ಲಿ ಗುಂಡಿನ ಚಕಮಕಿ ನಡೆಸಿದೆ ಎಂದು ಪೊಲೀಸ್ ಮಹಾನಿರೀಕ್ಷಕ (ಬಸ್ತರ್ ರೇಂಜ್) ಸುಂದರರಾಜ್ ಪಿ ತಿಳಿಸಿದ್ದಾರೆ.

ಜಿಲ್ಲಾ ರಿಸರ್ವ್ ಗಾರ್ಡ್(ಡಿಆರ್‌ಜಿ) ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್) ಗೆ ಸೇರಿದ ಸಿಬ್ಬಂದಿ ಶನಿವಾರ ರಾತ್ರಿ ರಾಯ್‌ಪುರ ದಿಂದ 450 ಕಿಮೀ ದೂರದಲ್ಲಿರುವ ಜಬೇಲಿ, ದುರ್ಧಾ ಮತ್ತು ಮೊಸ್ಲಾ ಗ್ರಾಮಗಳ ಕಡೆಗೆ ಕಾರ್ಯಾಚರಣೆ ಪ್ರಾರಂಭಿಸಿದರು. ಭಾನುವಾರ ಗಸ್ತು ತಿರುಗುವ ತಂಡವು ಶಸ್ತ್ರಸಜ್ಜಿತ ನಕ್ಸಲರ ಗುಂಪಿನೊಂದಿಗೆ ಮುಖಾಮುಖಿಯಾಗಿದ್ದು ಗುಂಡಿನ ದಾಳಿ ನಡೆದಿತ್ತು ಎಂದು ಹೇಳಿದರು.

ಗುಂಡಿನ ಚಕಮಕಿ ನಡೆದ ಸ್ಥಳದಲ್ಲಿ ಇಬ್ಬರು ಮಹಿಳಾ ಕಾರ್ಯಕರ್ತರ ದೇಹಗಳನ್ನು 12 ಬೋರ್ ಗನ್, 9 ಎಂಎಂ ಪಿಸ್ತೂಲ್, ಕಾರ್ಡೆಕ್ಸ್ ವೈರ್, ಸ್ಫೋಟಕ ವಸ್ತುಗಳು ಮತ್ತು ಇತರ ಮಾವೋವಾದಿಗಳಿಗೆ ಸಂಬಂಧಿಸಿದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.