Wednesday, 11th December 2024

Nayab Singh Saini: ಅ.17ರಂದು ಹರಿಯಾಣ ಸಿಎಂ ಆಗಿ ನಯಾಬ್ ಸಿಂಗ್ ಸೈನಿ ಪ್ರಮಾಣ ವಚನ; ಪ್ರಧಾನಿ ಮೋದಿ ಭಾಗಿ

nayab singh saini

ಚಂಡೀಗಢ: ಹರಿಯಾಣ(Haryana Assembly Election)ದಲ್ಲಿ ಬಿಜೆಪಿ(BJP) ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದು, ಅಕ್ಟೋಬರ್ 17 ರಂದು ಬಿಜೆಪಿ ನಾಯಕ ನಯಾಬ್ ಸಿಂಗ್ ಸೈನಿ(Nayab Singh Saini) ಅವರು ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ(Oath) ಸ್ವೀಕರಿಸಲಿದ್ದಾರೆ. ಸೈನಿ ಅವರು ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಐತಿಹಾಸಿಕ ಮೂರನೇ ಸತತ ಗೆಲುವಿನತ್ತ ಮುನ್ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿ(PM Narendra Modi) ಈ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

ಪಂಚಕುಲದ ಪರೇಡ್ ಮೈದಾನದಲ್ಲಿ ಬೆಳಗ್ಗೆ 10 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಆಡಳಿತವಿರುವ ಇತರ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಹಿರಿಯ ನಾಯಕರು ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಮೂಲಗಳ ಪ್ರಕಾರ, ಸಮಾರಂಭಕ್ಕೂ ಮುನ್ನ ನಡೆಯುವ ಸಭೆಯಲ್ಲಿ ಸೈನಿ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರಾಗಿ ಔಪಚಾರಿಕವಾಗಿ ಆಯ್ಕೆಯಾಗಲಿದ್ದಾರೆ.

ಪ್ರಮಾಣ ವಚನ ಸ್ವೀಕಾರ ಸಮಾರಂಭದ ವ್ಯವಸ್ಥೆಗಳ ಮೇಲ್ವಿಚಾರಣೆಗಾಗಿ ರಾಜ್ಯ ಮುಖ್ಯ ಕಾರ್ಯದರ್ಶಿ 10 ಸದಸ್ಯರ ಸಮಿತಿಯನ್ನು ರಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಮಿತಿಯ ನೇತೃತ್ವವನ್ನು ಪಂಚಕುಲ ಜಿಲ್ಲಾಧಿಕಾರಿ ವಹಿಸಲಿದ್ದಾರೆ. ಮಾರ್ಚ್‌ನಲ್ಲಿ ಮನೋಹರ್ ಲಾಲ್ ಖಟ್ಟರ್ ಬದಲಿಗೆ ಮುಖ್ಯಮಂತ್ರಿಯಾಗಿ ನೇಮಕಗೊಂಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸೇರಿದ ನಯಾಬ್ ಸಿಂಗ್ ಸೈನಿ ಅವರು ಗೆದ್ದರೆ ಉನ್ನತ ಹುದ್ದೆಗೆ ಆಯ್ಕೆಯಾಗುತ್ತಾರೆ ಎಂದು ಬಿಜೆಪಿ ಚುನಾವಣೆಯ ಸಮಯದಲ್ಲಿ ಸೂಚಿಸಿತ್ತು.

ಈ ವಾರದ ಆರಂಭದಲ್ಲಿ, ನಯಾಬ್ ಸಿಂಗ್ ಸೈನಿ ಮತ್ತು ಹರಿಯಾಣದ ಹೊಸದಾಗಿ ಚುನಾಯಿತರಾದ ಇತರ ಬಿಜೆಪಿ ಶಾಸಕರು ದೆಹಲಿಯಲ್ಲಿ ಪಕ್ಷದ ಹಿರಿಯ ನಾಯಕರನ್ನು ಭೇಟಿಯಾದರು. ನಯಾಬ್ ಸಿಂಗ್ ಸೈನಿ ಅವರು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮುಖ್ಯಸ್ಥ ಮತ್ತು ಕೇಂದ್ರ ಸಚಿವರಾದ ಅಮಿತ್ ಶಾ ಮತ್ತು ಜೆಪಿ ನಡ್ಡಾ ಅವರನ್ನು ಭೇಟಿಯಾದರು.

ಭಾರೀ ನೆಕ್‌ ಟು ನೆಕ್‌ ಫೈಟ್‌ ನಡುವೆಯೇ ಬಿಜೆಪಿ ಈ ಬಾರಿ ಅಧಿಕಾರಕ್ಕೆ ಬಂದಿದೆ. 90 ಅಸೆಂಬ್ಲಿ ಸ್ಥಾನಗಳಲ್ಲಿ 48 ಸ್ಥಾನಗಳನ್ನು ಗಳಿಸುವ ಮೂಲಕ ಸ್ಪಷ್ಟ ಬಹುಮತ ಪಡೆದು ಹ್ಯಾಟ್ರಿಕ್‌ ಸಾಧನೆ ಮಾಡಿತ್ತು. ಆಮೂಲಕ ಚುನಾವಣೋತ್ತರ ಸಮೀಕ್ಷೆಯನ್ನೂ ಹುಸಿ ಮಾಡಿತ್ತು. ಮತ್ತೊಂದೆಡೆ ಹತ್ತು ವರ್ಷಗಳ ಬಳಿಕ ಅಧಿಕಾರಕ್ಕೆ ಬರುವ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ 37 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

2019 ರಿಂದ ಮಾರ್ಚ್ 2024 ರವರೆಗೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಜೆಜೆಪಿ ತೀರ ಮುಖಭಂಗ ಎದುರಿಸಿದ್ದು, ಮತ್ತೊಂದೆಡೆ ಎಎಪಿ ಕೂಡ ತನ್ನ ಖಾತೆಯನ್ನು ತೆರೆಯಲು ವಿಫಲವಾಗಿದೆ. ಇನ್ನು ಐಎನ್‌ಎಲ್‌ಡಿ ಕೇವಲ ಎರಡು ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಸಾವಿತ್ರಿ ಜಿಂದಾಲ್ ಸೇರಿದಂತೆ ಮೂವರು ಪಕ್ಷೇತರರೂ ಗೆದ್ದು ಬಿಜೆಪಿಗೆ ಬೆಂಬಲ ನೀಡಲು ನಿರ್ಧರಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Delhi assembly election : ಹರಿಯಾಣದ ಕೋಪ ; ಡೆಲ್ಲಿಯಲ್ಲಿ ಕಾಂಗ್ರೆಸ್‌ ಜತೆ ಮೈತ್ರಿ ಮಾಡದಿರಲು ಆಪ್‌ ನಿರ್ಧಾರ