Saturday, 23rd November 2024

NEET-UG ಪರೀಕ್ಷೆಯ ಪತ್ರಿಕೆ ಸೋರಿಕೆ ಪ್ರಕರಣ: ಇಬ್ಬರ ಬಂಧನ

ಪಾಟ್ನಾ: NEET-UG ಪರೀಕ್ಷೆಯ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರೀಯ ತನಿಖಾ ದಳ (CBI) ಬಿಹಾರದ ಪಾಟ್ನಾದಲ್ಲಿ ಇಬ್ಬರನ್ನು ಬಂಧಿಸಿದೆ.

ಬಂಧಿತರನ್ನು ಮನೀಶ್ ಕುಮಾರ್ ಮತ್ತು ಅಶುತೋಷ್ ಕುಮಾರ್ ಎಂದು ಗುರುತಿಸಲಾಗಿದೆ. ಬಂಧಿತರು ಪರೀಕ್ಷೆಗೂ ಮುನ್ನ ಆಕಾಂಕ್ಷಿಗಳಿಗೆ ಪ್ರಶ್ನೆಪತ್ರಿಕೆಗಳು ಮತ್ತು ಉತ್ತರ ಕೀಗಳನ್ನು ನೀಡಿದ್ದರು ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.

ಸಿಬಿಐ ತನಿಖೆ ಕೈಗೆತ್ತಿಕೊಂಡ ಬಳಿಕ ನಡೆಸಿದ ಮೊದಲ ಬಂಧನವಾಗಿದೆ. ಈವರೆಗೆ ಸ್ಥಳೀಯ ಪೊಲೀಸರು ಬಂಧಿಸಿದ ವ್ಯಕ್ತಿಗಳನ್ನು ಮಾತ್ರ ಸಿಬಿಐ ಕಸ್ಟಡಿಗೆ ತೆಗೆದುಕೊಂಡಿತ್ತು. ಈಗ ಬಂಧಿತ ಮನೀಶ್ ಪ್ರಕಾಶ್ ಮತ್ತು ಅಶುತೋಷ್ ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಸಿಬಿಐ ಬಂಧನಕ್ಕೂ ಮುನ್ನ ಬಿಹಾರ, ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಬಿಹಾರ ಸರ್ಕಾರವು 2024 ರ ನೀಟ್-ಯುಜಿ ಪರೀಕ್ಷೆಯಲ್ಲಿನ ಅಕ್ರಮಗಳ ತನಿಖೆಯನ್ನು ಸಿಬಿಐ ಹಸ್ತಾಂತರಿಸಿದೆ. ಆರ್ಥಿಕ ಅಪರಾಧಗಳ ಘಟಕವು ಎಲ್ಲಾ ದಾಖಲೆಗಳನ್ನು ಕೇಂದ್ರ ಏಜೆನ್ಸಿಗೆ ಹಸ್ತಾಂತರಿಸಿದೆ. ಪ್ರಕರಣದಲ್ಲಿ ಸಿಬಿಐ ಆರು ಎಫ್‌ಐಆರ್‌ಗಳನ್ನು ದಾಖಲಿಸಿದೆ.