Friday, 13th December 2024

ದೆಹಲಿಯಲ್ಲಿ 133.4 ಮಿ.ಮೀ ಮಳೆ

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಶನಿವಾರ ಬೆಳಗ್ಗೆಯಿಂದ ಸಂಜೆ 5.30ರವರೆಗೆ 126.1 ಮಿ.ಮೀ ಮಳೆ ಸುರಿಯಿತು. ಭಾನುವಾರ 133.4 ಮಿ.ಮೀ ಮಳೆಯಾಗಿದ್ದು, 20 ವರ್ಷಗಳ ನಂತರ ಒಂದು ದಿನದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಮಳೆ ಬಿದ್ದಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ರಾಜಧಾನಿಯ ಹಲವೆಡೆ ಜಡಿ ಮಳೆಗೆ ರಸ್ತೆಗಳು ಮುಳುಗಡೆಯಾದವು. ಚರಂಡಿಗಳು ತುಂಬಿ ಹರಿದವು. ನೀರು ರಸ್ತೆಯಲ್ಲೇ ನಿಂತು ಗಂಟೆಗಟ್ಟಲೆ ವಾಹನ ಸಂಚಾರಕ್ಕೆ ತೊಂದರೆಯಾಯಿತು. ವಾಹನ ಸವಾರರು ಮತ್ತು ಪಾದಚಾರಿಗಳು ಜಲಾವೃತ ರಸ್ತೆಗಳು, ಮೇಲ್ಸೇತುವೆಗಳು ಮತ್ತು ಕಾಲುದಾರಿಗಳ ಮೂಲಕ ಸಂಚರಿಸಲು ಪರದಾಡಿದರು.

ಮಳೆಗೆ ದೆಹಲಿಯಲ್ಲಿ 15 ಮನೆಗಳು ಕುಸಿದ ವರದಿಯಾಗಿದೆ. 56 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ದಕ್ಷಿಣ ದೆಹಲಿಯ ಕಲ್ಕಾಜಿ ಯಲ್ಲಿರುವ ದೇಶಬಂಧು ಕಾಲೇಜಿನ ಗೋಡೆ ಕುಸಿದು ಹಲವು ಕಾರುಗಳಿಗೆ ಹಾನಿಯಾಯಿತು. ಮಯೂರ್ ವಿಹಾರ್ ಪ್ರದೇಶ ದಲ್ಲಿಯೂ ಅತಿಯಾದ ಮಳೆ ಸಂಚಾರಕ್ಕೆ ಅಡ್ಡಿಯಾಯಿತು. ಮುಂದಿನ 2 ದಿನಗಳಲ್ಲಿ ತುಂತುರು ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಪವಿತ್ರ ಅಮರನಾಥ ಯಾತ್ರೆಯನ್ನು ಈಗಾಗಲೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಯಾತ್ರೆ ಜುಲೈ 1ರಂದು ಪ್ರಾರಂಭ ವಾಗಿದ್ದು ಆಗಸ್ಟ್ 31ರಂದು ಮುಕ್ತಾಯಗೊಳ್ಳಲಿದೆ. ಭಾರಿ ಮಳೆಯಿಂದಾಗಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿತಗೊಂಡಿದೆ. ರಸ್ತೆ ಬದಿಯೇ ನೂರಾರು ವಾಹನಗಳು, ಸರಕು ಸಾಗಣೆ ಟ್ರಕ್‌ಗಳು ಜಮ್ಮು-ಕಾಶ್ಮೀರದ ಉಧಮ್​ಪುರ್​ದಲ್ಲಿ ಸಿಲುಕಿಕೊಂಡಿವೆ.