ನವದೆಹಲಿ: ಉತ್ತರ ಭಾರತದಲ್ಲಿ ವಿಪರೀತ ಚಳಿ ಹಾಗೂ ಮಂಜು ಮುಸುಕಿದ ವಾತಾವರಣ ಹಿನ್ನೆಲೆಯಲ್ಲಿ ವಿಮಾನ ಹಾಗೂ ರೈಲು ಸಂಚಾರಗಳಲ್ಲಿ ಭಾರಿ ವ್ಯತ್ಯಯವುಂಟಾಗಿದೆ.
ದೆಹಲಿಯಲ್ಲಿ ಏರ್ ಪೋರ್ಟ್ ಬಳಿ ಸಂಪೂರ್ಣ ದಟ್ಟ ಮಂಜು ಆವರಿಸಿದ್ದು, ರನ್ ವೇ ಗಳು ಕಾಣದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ, ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ.
ದಟ್ಟ ಮಂಜು, ಪ್ರತಿಕೂಲ ಹವಾಮಾನ ಸ್ಥಿತಿಯಿಂದಾಗಿ, ದೆಹಲಿಯಿಂದ ಹೊರಡುವ 17 ವಿಮಾನಗಳು ರದ್ದಾಗಿದ್ದು, 30 ವಿಮಾನಗಳು ವಿಳಂಬ ವಾಗಲಿವೆ ಎಂದು ತಿಳಿಸಲಾಗಿದೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಗೋಚರತೆ ಪ್ರಮಾಣ 500 ಮೀ. ವರೆಗೆ ಕುಸಿತವಾಗಿದೆ.
ಇನ್ನು ಉತ್ತರ ಭಾರತದಲ್ಲಿ ಹವಾಮಾನ ವೈಪರಿತ್ಯ ಹಿನ್ನೆಲೆಯಲ್ಲಿ 30 ರೈಲು ಸಂಚಾರ ವಿಳಂಬವಾಗಿದೆ. ವಿಮಾನ ಹಾಗೂ ರೈಲು ಸಂಚಾರಗಳಲ್ಲಿ ಭಾರಿ ವ್ಯತ್ಯಯದಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ.
ಇನ್ನು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ಮಂಜು ಮುಸುಕಿದ ವಾತಾವರಣವಿರುವುದರಿಂದ ರನ್ ವೇ ಸ್ಪಷ್ಟ ವಾಗಿಲ್ಲ. ಈ ಹಿನ್ನೆಲೆಯಲ್ಲಿ 22 ವಿಮಾನ ಹಾರಾಟದಲ್ಲಿ ವಿಳಂಬವಾಗಿದೆ. ಭಾನುವಾರ ಕೂಡ ದಟ್ಟ ಮಂಜಿನಿಂದಾಗಿ 44 ವಿಮಾನ ಹಾರಾಟ ವಿಳಂಬ ವಾಗಿತ್ತು.