ಭೋಪಾಲ್ (ಮಧ್ಯಪ್ರದೇಶ): ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಹರಡುವ ಹಿನ್ನೆಲೆಯಲ್ಲಿ 2021ರ ಮಾರ್ಚ್ 31ರವರೆಗೆ 1 ರಿಂದ 8ನೇ ತರಗತಿಗಳಿಗೆ ಶಾಲೆಗಳನ್ನು ಮುಚ್ಚಲಾಗುವುದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಈ ತರಗತಿಗಳ ವಿದ್ಯಾರ್ಥಿಗಳಿಗೆ ಯಾವುದೇ ಪರೀಕ್ಷೆ ನಡೆಸುವುದಿಲ್ಲ ಮತ್ತು ಅವರ ಪ್ರಾಜೆಕ್ಟ್ ವರ್ಕ್ ಆಧಾರದ ಮೇಲೆ ಮೌಲ್ಯ ಮಾಪನ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
‘ರಾಜ್ಯದಲ್ಲಿ 1ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ 2021ರ ಮಾರ್ಚ್ 31ರವರೆಗೆ ತರಗತಿಗಳು ಇರುವುದಿಲ್ಲ. 1ರಿಂದ 8ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಯಾವುದೇ ಪರೀಕ್ಷೆ ನಡೆಸುವುದಿಲ್ಲ ಮತ್ತು ಪ್ರಾಜೆಕ್ಟ್ ವರ್ಕ್ ಆಧಾರದ ಮೇಲೆ ಮೌಲ್ಯಮಾಪನ ಮಾಡ ಲಾಗುತ್ತದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
’10 ಮತ್ತು 12ನೇ ತರಗತಿಗಳಿಗೆ ಶಾಲೆಗಳು ಶೀಘ್ರದಲ್ಲೇ ಬೋರ್ಡ್ ಪರೀಕ್ಷೆಗಳಿಗೆ ಪುನರಾರಂಭವಾಗಲಿದೆ. ಆದರೆ, ಕೋವಿಡ್-19 ಹರಡುವುದನ್ನ ತಡೆಯಲು ತರಗತಿಗಳಲ್ಲಿ ಸಾಮಾಜಿಕ ವಿಂಗಡನೆ ಮತ್ತು ಇತರ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸ ಲಾಗುವುದು’ ಎಂದು ಹೇಳಿದ್ದಾರೆ.