Friday, 13th December 2024

ಯಾವುದೇ ಪಕ್ಷದ ಜೊತೆ ಮೈತ್ರಿ ಇಲ್ಲ, ಏಕಾಂಗಿ ಸ್ಪರ್ಧೆ: ಮಾಯಾವತಿ

ಲಕ್ನೋ: ಯಾವುದೇ ಪಕ್ಷದ ಜೊತೆ ಮೈತ್ರಿ ಇಲ್ಲ, ಬಿಎಸ್‌ಪಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ. ಈ ನಿರ್ಧಾರದಿಂದ ಬಹುಜನ ಸಮಾಜವಾದಿ ಪಕ್ಷದ ಜೊತೆ ಮುಂಬರುವ ಚುನಾವಣೆಗಳಲ್ಲಿ ಮೈತ್ರಿ ನಿರೀಕ್ಷೆ ಯಲ್ಲಿದ್ದ ಅಸಾಸುದ್ದೀನ್ ಒವೈಸಿಗೆ ನಿರಾಶೆಯಾಗಿದೆ.

ಈ ಮೂಲಕ ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳ ಚುನಾವಣೆಗಾಗಿ ಒವೈಸಿ ಅವರ ಎಐಎಂಐಎಂ ಜೊತೆ ಬಿಎಸ್‌ಪಿ ಮೈತ್ರಿ ಸಾಧಿಸಿವೆ ಎಂಬ ವರದಿಗಳನ್ನು ಮಾಯಾವತಿ ತಳ್ಳಿ ಹಾಕಿದ್ದಾರೆ.

ಆದರೆ, ಪಂಜಾಬ್ ವಿಧಾನಸಭೆ ಚುನಾವಣೆ(೨೦೨೨)ಯಲ್ಲಿ ಶಿರೋಮಣಿ ಅಕಾಲಿದಳ ಜೊತೆ ಮಾತ್ರ ಮೈತ್ರಿ ಸಾಧಿಸಲಾಗಿದೆ ಎಂದಿದ್ದಾರೆ. 117 ವಿಧಾನಸಭೆ ಕ್ಷೇತ್ರಗಳ ಪೈಕಿ ಅಕಾಲಿದಳ 97 ಕ್ಷೇತ್ರ ಹಾಗೂ ಬಿಎಸ್‌ಪಿ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದಾರೆ.

ಇನ್ನೊಂದೆಡೆ, ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು, ಹಳೆ ಫಲಿತಾಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಸಮಾಜವಾದಿ ಪಕ್ಷ ಯಾವುದೇ ದೊಡ್ಡ ಪಕ್ಷದ ಜೊತೆ ಮೈತ್ರಿ ಸಾಧಿಸುವುದಿಲ್ಲ ಎಂದರು.

2022ರಲ್ಲಿ ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಸಜ್ಜಾಗಿದೆ.