Saturday, 14th December 2024

ಆಂಧ್ರದಲ್ಲಿ ಮೊದಲ ಬಾರಿಗೆ ಶೂನ್ಯ ಪ್ರಕರಣ ದಾಖಲು

ಅಮರಾವತಿ: ಆಂಧ್ರಪ್ರದೇಶದಲ್ಲಿ ಕಳೆದ ಎರಡು ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಸೋಮವಾರ ಒಂದೇ ದಿನ ಶೂನ್ಯ ಪ್ರಕರಣ ವರದಿಯಾಗಿದೆ.

ಆದರೆ, ರಾಜ್ಯ ಇನ್ನೂ ಕರೋನಾದಿಂದ ಮುಕ್ತವಾಗಿಲ್ಲ. ಏಕೆಂದರೆ ರಾಜ್ಯದಲ್ಲಿ ಇನ್ನು 22 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದಲ್ಲಿ ಸೋಮವಾರ ನಡೆಸಿದ 2,163 ಪರೀಕ್ಷೆಗಳೆಲ್ಲವೂ ನೆಗೆಟಿವ್ ವರದಿ ಬಂದಿದೆ ಎಂದು ರಾಜ್ಯ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆ ಅಂಕಿ ಅಂಶ ಮಾಹಿತಿ ನೀಡಿದೆ.

ಆಂಧ್ರಪ್ರದೇಶದಲ್ಲಿ ಒಟ್ಟಾರೆ 23,19,662 ಪ್ರಕರಣಗಳಿದ್ದು, ಇದರಲ್ಲಿ 23,04,910 ಮಂದಿ ಗುಣಮುಖರಾಗಿದ್ದಾರೆ. ಉಳಿದಂತೆ 14,730 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರಕ್ಕೂ ಮುನ್ನ ಏ.23 ರಂದು ಆರೋಗ್ಯ ಇಲಾಖೆ ಸೋಂಕಿನ ಅಂಕಿ ಅಂಶ ಬಿಡುಗಡೆ ಮಾಡಿದ್ದು, ಅದರಲ್ಲಿ ಎರಡು ಹೊಸ ಪ್ರಕರಣಗಳು ಪತ್ತೆಯಾಗಿ ದ್ದವು.

ಆಂಧ್ರಪ್ರದೇಶದಲ್ಲಿ ಕೊರೊನಾ ಪ್ರಕರಣಗಳು ಇಳಿಕೆಯಾಗುತ್ತಿರುವುದು ಸಮಾಧಾನ ತರಿಸಿದರೂ. ಸಹ ಮುಂದಿನ ದಿನಗಳಲ್ಲಿ ಸೋಂಕು ಹೆಚ್ಚಾಗುವ ಎಲ್ಲಾ ಸಾಧ್ಯತೆ ಇದೆ. ಹಲವು ರಾಜ್ಯಗಳಲ್ಲಿ ಕೊರೊನಾ ನಾಲ್ಕನೇ ಅಲೆಯ ಭೀತಿ ಶುರುವಾಗಿದೆ. ಹೀಗಾಗಿ ಆಂಧ್ರಪ್ರದೇಶದ ನೆರೆ ಹೊರೆ ರಾಜ್ಯಗಳಲ್ಲೂ ಸಹ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ.

ಸದ್ಯಕ್ಕೆ ರಾಜ್ಯದಲ್ಲಿ ಕಳೆದ ಎರಡು ವರ್ಷಗಳಲ್ಲೇ ಮೊದಲ ಬಾರಿಗೆ ಶೂನ್ಯ ಪ್ರಕರಣ ದಾಖಲಿಸಿರುವುದು ಆಶ್ಚರ್ಯದ ಜೊತೆಗೆ ಹೆಚ್ಚಿನ ಜವಾಬ್ದಾರಿಯನ್ನು ಸಹ ಹೊರಿಸಿದೆ.

ದೇಶದಲ್ಲೆಡೆ ಕರೋನಾ ನಾಲ್ಕನೇ ಅಲೆ ಭೀತಿ ಶುರುವಾಗಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಮುಂಜಾಗೃತ ಕ್ರಮವಾಗಿ ಮಾಸ್ಕ್, ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯ ಮಾಡಿದೆ.