Sunday, 13th October 2024

ಪಕ್ಷದಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶ ನೀಡುವುದಿಲ್ಲ: ನರೇಂದ್ರ ಮೋದಿ

ನವದೆಹಲಿ: ಭಾರತೀಯ ಜನತಾ ಪಕ್ಷದಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿಯ ಸಂಸದೀಯ ಪಕ್ಷದ ಸಭೆಯಲ್ಲಿ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ನಮ್ಮ ಪಕ್ಷದಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶ ನೀಡುವುದಿಲ್ಲ. ಇತರ ಪಕ್ಷಗಳಲ್ಲಿ ಇರುವ ವಂಶಾಡಳಿತದ ವಿರುದ್ಧ ಹೋರಾಟ ನಡೆಸಬೇಕಾಗಿದೆ. ಒಂದು ವೇಳೆ ಯಾರ ಮಕ್ಕಳಿಗಾದರೂ ಟಿಕೆಟ್ ನಿರಾಕರಿಸಿದರೆ ಅದರ ಹೊಣೆ ನಾನೇ ಹೊರುತ್ತೇನೆ ಎಂದು ಹೇಳಿದ್ದಾರೆ.

ಸಭೆಯಲ್ಲಿ ಯುದ್ಧಗ್ರಸ್ಥ ಉಕ್ರೇನ್ ನಿಂದ ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ ಕಾರ್ಯಾಚರಣೆ ಬಗ್ಗೆ ಪ್ರಧಾನಿ ಮಾಹಿತಿ ನೀಡಿದ್ದು, ಮೂಲಗಳ ಪ್ರಕಾರ, ಬಿಜೆಪಿಯೇತರ ಮುಖ್ಯಮಂತ್ರಿಗಳು ಉಕ್ರೇನ್ ವಿಚಾರವನ್ನು ರಾಜಕೀಯ ಗೊಳಿಸಿರುವು ದಾಗಿ ಆರೋಪಿಸಿದ್ದಾರೆ ಎಂದು ವರದಿ ಹೇಳಿದೆ.

ಬಿಜೆಪಿ ಸಂಸದ ಮನೋಜ್ ತಿವಾರಿ, ಸಭೆಯಲ್ಲಿ ಪ್ರಧಾನಿ ಮೋದಿ ಅವರು ಕಾಶ್ಮೀರ ಫೈಲ್ಸ್ ಸಿನಿಮಾದ ಬಗ್ಗೆ ಧ್ವನಿ ಎತ್ತಿದ್ದು, ಕೆಲವೊಂದು ಗುಂಪುಗಳು ಈಗಲೂ ಸತ್ಯವನ್ನು ಸಮಾಧಿ ಮಾಡಲು ಹೊರಟಿವೆ. ನಾವು ಇಂತಹ ಸತ್ಯಗಳನ್ನು ದೇಶದ ಜನರ ಮುಂದಿಡಬೇಕೆಂದು ತಿಳಿಸಿರುವುದಾಗಿ ವರದಿಯಾಗಿದೆ.

ಪಂಚರಾಜ್ಯ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಕಳಪೆ ಸಾಧನೆ ಮಾಡಿರುವ ಕ್ಷೇತ್ರಗಳ ಬಗ್ಗೆ ಕಾರಣದ ಕುರಿತು ಪರಿಶೀಲನೆ ನಡೆಸಬೇಕು ಎಂದು ಪಕ್ಷದ ಸಂಸದರಿಗೆ ಸೂಚನೆ ನೀಡಿರುವುದಾಗಿ ವರದಿ ಹೇಳಿದೆ.