Saturday, 14th December 2024

PM Proposes 11 Resolutions: ಲೋಕಸಭೆಯಲ್ಲಿ 11 ನಿರ್ಣಯಗಳನ್ನು ಮಂಡಿಸಿದ ಪ್ರಧಾನಿ ಮೋದಿ!

'No Nepotism In Politics, Focus On Duties': PM Narendra Modi Proposes 11 Resolutions In Lok Sabha

ನವದೆಹಲಿ: ಸಂವಿಧಾನ ಅಂಗೀಕಾರವಾಗಿ 75 ವರ್ಷಗಳಾದ ಹಿನ್ನೆಲೆಯಲ್ಲಿ ನಡೆದಿದ್ದ ಚರ್ಚೆಗೆ ಸುದೀರ್ಘ ಉತ್ತರ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಲೋಕಸಭೆಯಲ್ಲಿ 11 ನಿರ್ಣಯಗಳನ್ನು(PM Proposes 11 Resolutions) ಮಂಡಿಸಿದ್ದಾರೆ ಹಾಗೂ 2047ರ ಹೊತ್ತಿಗೆ ಭಾರತ ಅಭಿವೃದ್ದಿ ಹೊಂದಿದ ದೇಶವಾಗುವ ಗುರಿಯನ್ನು ಸಾಧಿಸಲು ಇವು ಸಹಾಯವಾಗಲಿವೆ ಎಂದು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ಸುಮಾರು ಎರಡು ಗಂಟೆಗಳ ಕಾಲ ಮಾಡಿದ್ದ ಭಾಷಣದಲ್ಲಿ ಪಿಎಂ ಮೋದಿ, ತಮ್ಮ ಸರ್ಕಾರದ ಸಾಧನೆಗಳನ್ನು ಬಿಚ್ಚಿಟ್ಟರು ಹಾಗೂ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಭಾರತದ ಜನರನ್ನು ಶ್ಲಾಘಿಸಿದರು. ಅದರಲ್ಲಿಯೂ ವಿಶೇಷವಾಗಿ ನೆಹರು-ಗಾಂಧಿ ಕುಟುಂಬವು ತಲೆಮಾರುಗಳಿಂದ ಸಂವಿಧಾನವನ್ನು ದುರ್ಬಲಗೊಳಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು. ಅಭಿವೃದ್ಧಿ ಹೊಂದಿದ ಭಾರತವು 140 ಕೋಟಿ ನಾಗರಿಕರ ಕನಸಾಗಿದೆ ಮತ್ತು ರಾಷ್ಟ್ರವು ಒಂದು ಸಂಕಲ್ಪದೊಂದಿಗೆ ಮುನ್ನಡೆದಾಗ ಫಲಿತಾಂಶಗಳು ಖಾತರಿಪಡಿಸುತ್ತವೆ ಎಂದು ಅವರು ಒತ್ತಿ ಹೇಳಿದರು.

“ನನ್ನ ಸಹ ನಾಗರಿಕರು ಮತ್ತು ಅವರ ಸಾಮರ್ಥ್ಯಗಳು, ಯುವಕರು ಹಾಗೂ ಮಹಿಳಾ ಶಕ್ತಿ ಮೇಲೆ ನನಗೆ ಅಪಾರ ನಂಬಿಕೆ ಇದೆ. ಭಾರತವು 2047ರಲ್ಲಿ ತನ್ನ ಸ್ವಾತಂತ್ರ್ಯದ 100ನೇ ವರ್ಷವನ್ನು ಆಚರಿಸುವ ವೇಳೆ, ಭಾರತ ಸಂಪೂರ್ಣ ಅಭಿವೃದ್ದಿ ಹೊಂದಿದೆ ಎಂದು ಸಂಭ್ರಮಿಸುತ್ತೇವೆಂದು ನಾವೆಲ್ಲರೂ ಇದೀಗ ಸಂಕಲ್ಪ ಮಾಡೋಣ,” ಎಂದು ನರೇಂದ್ರ ಮೋದಿ ಕರೆ ನೀಡಿದರು.

ಲೋಕಸಭೆಯಲ್ಲಿ ತಮ್ಮ ಭಾಷಣದ ಕೊನೆಯಲ್ಲಿ ಪ್ರಧಾನಿ 11 ಪ್ರತಿಜ್ಞೆಗಳನ್ನು ಮಂಡಿಸಿದರು. ಅವರು ಅಂತರ್ಗತ ಬೆಳವಣಿಗೆ ಮತ್ತು ಭ್ರಷ್ಟಾಚಾರದ ಕಡೆಗೆ ಶೂನ್ಯ ಸಹಿಷ್ಣುತೆಯ ಮೇಲೆ ಒತ್ತಿ ಹೇಳಿದರು. ಸಂವಿಧಾನದ ಅಂಗೀಕಾರದ 75ನೇ ವರ್ಷವು ಜನರ ಕರ್ತವ್ಯಗಳ ಬಗೆಗಿನ ಬದ್ಧತೆಯನ್ನು ಮತ್ತಷ್ಟು ಬಲಪಡಿಸಲಿ ಎಂದು ಹಾರೈಸಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂಡಿಸಿದ 11 ನಿರ್ಣಯಗಳು

  1. ನಾಗರಿಕರಾಗಲಿ ಅಥವಾ ಸರ್ಕಾರವಾಗಲಿ, ಪ್ರತಿಯೊಬ್ಬರೂ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು.
  2. ಪ್ರತಿಯೊಂದು ಪ್ರದೇಶ, ಪ್ರತಿಯೊಂದು ಸಮಾಜವೂ ಅಭಿವೃದ್ಧಿಯಿಂದ ಪ್ರಯೋಜನ ಪಡೆಯಬೇಕು, ಎಲ್ಲರೂ ಬೆಂಬಲಿಸಬೇಕು, ಎಲ್ಲರೂ ಅಭಿವೃದ್ಧಿ ಹೊಂದಬೇಕು.
  3. ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆ ಇರಬೇಕು, ಭ್ರಷ್ಟರನ್ನು ಸಾಮಾಜಿಕವಾಗಿ ಒಪ್ಪಿಕೊಳ್ಳಬಾರದು.
  4. ದೇಶದ ಕಾನೂನುಗಳು, ದೇಶದ ನಿಯಮಗಳು, ದೇಶದ ಸಂಪ್ರದಾಯಗಳನ್ನು ಅನುಸರಿಸುವಲ್ಲಿ ದೇಶದ ನಾಗರಿಕರು ಹೆಮ್ಮೆಪಡಬೇಕು. ಹೆಮ್ಮೆಯ ಭಾವವನ್ನು ಹೊಂದಬೇಕು.
  5. ಗುಲಾಮಗಿರಿಯ ಮನಸ್ಥಿತಿಯಿಂದ ಮುಕ್ತರಾಗಿ ದೇಶದ ಪರಂಪರೆಯ ಬಗ್ಗೆ ಹೆಮ್ಮೆ ಪಡಬೇಕು.
  6. ದೇಶದ ರಾಜಕೀಯವನ್ನು ಸ್ವಜನಪಕ್ಷಪಾತದಿಂದ ಮುಕ್ತಗೊಳಿಸಬೇಕು.
  7. ಸಂವಿಧಾನವನ್ನು ಗೌರವಿಸಬೇಕು. ರಾಜಕೀಯ ಲಾಭಕ್ಕಾಗಿ ಸಂವಿಧಾನವನ್ನು ಅಸ್ತ್ರವನ್ನಾಗಿ ಮಾಡಿಕೊಳ್ಳಬಾರದು.
  8. ಸಂವಿಧಾನದ ಆಶಯವನ್ನು ಗೌರವಿಸಬೇಕು ಮತ್ತು ಮೀಸಲಾತಿಯನ್ನು ಪಡೆಯುತ್ತಿರುವವರಿಂದ ಕಿತ್ತುಕೊಳ್ಳಬಾರದು. ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವ ಎಲ್ಲ ಪ್ರಯತ್ನಗಳನ್ನು ನಿಲ್ಲಿಸಬೇಕು.
  9. ಮಹಿಳಾ ನೇತೃತ್ವದ ಅಭಿವೃದ್ಧಿಯಲ್ಲಿ ಭಾರತವು ಜಗತ್ತಿಗೆ ಉದಾಹರಣೆಯಾಗಬೇಕು.
  10. ರಾಜ್ಯದ ಅಭಿವೃದ್ಧಿಯ ಮೂಲಕ ರಾಷ್ಟ್ರದ ಅಭಿವೃದ್ಧಿ, ಇದು ನಮ್ಮ ಅಭಿವೃದ್ಧಿಯ ಮಂತ್ರವಾಗಬೇಕು.
  11. ಏಕ ಭಾರತ, ಭವ್ಯ ಭಾರತ ಗುರಿ ಅತಿಮುಖ್ಯವಾಗಿರಬೇಕು.

ಈ ಸುದ್ದಿಯನ್ನು ಓದಿ: Narendra Modi: ‘ಗಾಂಧಿ ಕುಟುಂಬದಿಂದ ಸಂವಿಧಾನಕ್ಕೆ ಅವಮಾನʼ-ಕಾಂಗ್ರೆಸ್‌ ವಿರುದ್ದ ಪ್ರಧಾನಿ ಮೋದಿ ಕಿಡಿ!