Wednesday, 11th December 2024

Noel Tata: ಟಾಟಾ ಟ್ರಸ್ಟ್‌ನ ಮುಖ್ಯಸ್ಥರಾಗಿ ನೇಮಕವಾದ ನೋಯೆಲ್ ಟಾಟಾ ಯಾರು? ರತನ್‌ಗೂ ಅವರಿಗೂ ಏನು ಸಂಬಂಧ

Noel Tata

ಟಾಟಾ ಗ್ರೂಪ್‌ನ (TATA Group)  ಸಮಾಜಸೇವಾ ವಿಭಾಗದ ಟಾಟಾ ಟ್ರಸ್ಟ್‌ನ ಮುಖ್ಯಸ್ಥರನ್ನಾಗಿ ನೋಯೆಲ್‌ ಟಾಟಾ (Noel Tata) ನೇಮಕಗೊಂಡಿದ್ದಾರೆ. ಅವರು ಇತ್ತೀಚೆಗೆ ನಿಧನ ಹೊಂದಿದ ಖ್ಯಾತ ಉದ್ಯಮಿ ರತನ್ ಟಾಟಾ (Ratan Tata) ಅವರ ಮಲಸಹೋದರ. ಅವರ ತಂದೆಯ ಎರಡನೇ ಪತ್ನಿಯ ಪುತ್ರ. ಶುಕ್ರವಾರ ನೋಯೆಲ್ ಅವರ ನೇಮಕವನ್ನು ಸರ್ವಾನುಮತದಿಂದ ಮಾಡಲಾಗಿದೆ ಎಂದು ಟಾಟಾ ಟ್ರಸ್ಟ್ ಪ್ರಕಟಿಸಿದೆ. ಇದರೊಂದಿಗೆ ನೋಯೆಲ್ ಅವರು 165 ಶತಕೋಟಿ ಡಾಲರ್ ಮೌಲ್ಯದ ಟ್ರಸ್ಟ್‌ನ ನೇತೃತ್ವ ವಹಿಸಿಕೊಂಡಿದ್ದಾರೆ.

ನೋಯೆಲ್ ಟಾಟಾ ಯಾರು?

ಐರಿಶ್ (ಐರ್ಲೆಂಡ್‌ ದೇಶ) ಪ್ರಜೆಯಾಗಿರುವ ನೋಯೆಲ್ ಟಾಟಾ ಅವರು ಟಾಟಾ ಗ್ರೂಪ್‌ನ ಹಲವಾರು ಕಂಪನಿಗಳ ಮಂಡಳಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳದ ಇವರು ಕಂಪೆನಿಯ ಕಾರ್ಯಾಚರಣೆಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುತ್ತಿದ್ದರು.

ನೋಯೆಲ್ ಅವರು ನೇವಲ್ ಟಾಟಾ ಮತ್ತು ಸಿಮೋನ್ ಟಾಟಾ ಪುತ್ರ. ಅಂದ ಹಾಗೆ ನೋಯಲ್ ಅವರ ಅಪ್ಪ ನೇವಲ್‌ ಸಿಮೋನ್ ಅವರನ್ನು ವಿವಾಹವಾಗುವ ಮೊದಲು ಸೂನೂ ಕಮಿಸರಿಯಟ್ ಅವರನ್ನು ಮದುವೆಯಾಗಿದ್ದರು. ಅವರ ಮಕ್ಕಳೇ ರತನ್ ಮತ್ತು ಜಿಮ್ಮಿ ಟಾಟಾ. ನೋಯೆಲ್ ಅವರು ಪಲ್ಲೊಂಜಿ ಮಿಸ್ತ್ರಿಯ ಪುತ್ರಿ ಮತ್ತುಟಾಟಾ ಸನ್ಸ್‌ ಗ್ರೂಪ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರ ಸಹೋದರಿ ಆಲೂ ಮಿಸ್ತ್ರಿ ಅವರನ್ನು ವಿವಾಹವಾಗಿದ್ದಾರೆ. ಅವರಿಗೆ ಮೂವರು ಮಕ್ಕಳು ಲಿಯಾ, ಮಾಯಾ ಮತ್ತು ನೆವಿಲ್ಲೆ.

ಟಾಟಾ ಇಂಟರ್‌ನ್ಯಾಶನಲ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ನೋಯೆಲ್ ಟಾಟಾ ಅನಂತರ 1999ರಲ್ಲಿ ಟ್ರೆಂಟ್‌ನ ವ್ಯವಸ್ಥಾಪಕ ನಿರ್ದೇಶಕರಾದರು. ಅಲ್ಲಿ ಅವರು ವೆಸ್ಟ್‌ಸೈಡ್ ವಸ್ತ್ರ ಮಳಿಗೆಯ ಮುಖ್ಯಸ್ಥರಾರದರು. ನೋಯೆಲ್ ಟ್ರೆಂಟ್, ಟಾಟಾ ಇಂಟರ್ನ್ಯಾಷನಲ್, ವೋಲ್ಟಾಸ್ ಮತ್ತು ಟಾಟಾ ಇನ್ವೆಸ್ಟ್‌ಮೆಂಟ್ ಕಾರ್ಪೊರೇಶನ್‌ನ ಅಧ್ಯಕ್ಷರು ಮತ್ತು ಟಾಟಾ ಸ್ಟೀಲ್ ಮತ್ತು ಟೈಟಾನ್ ಕಂಪನಿ ಲಿಮಿಟೆಡ್‌ನ ಉಪಾಧ್ಯಕ್ಷ.

2019ರಿಂದ ನೋಯೆಲ್ ಅವರು ಸರ್ ರತನ್ ಟಾಟಾ ಟ್ರಸ್ಟ್ ಮತ್ತು ಸರ್ ದೊರಾಬ್ಜಿ ಟಾಟಾ ಟ್ರಸ್ಟ್‌ನ ಮಂಡಳಿಯಲ್ಲಿದ್ದಾರೆ. ಅವರ ಮಕ್ಕಳನ್ನು 2023ರಲ್ಲಿ ಈ ಫೌಂಡೇಶನ್‌ಗಳಿಗೆ ಲಿಂಕ್ ಮಾಡಿದ ವಿವಿಧ ಟ್ರಸ್ಟ್‌ಗಳ ಟ್ರಸ್ಟಿಗಳಾಗಿ ನೇಮಿಸಲಾಗಿದೆ.

Noel Tata

ಟಾಟಾ ಟ್ರಸ್ಟ್‌ನ ಸಾಮರ್ಥ್ಯವೇನು?

ಟಾಟಾ ಟ್ರಸ್ಟ್‌ಗಳು ಟಾಟಾ ಗ್ರೂಪ್‌ನಲ್ಲಿ ಅತ್ಯಂತ ಪ್ರಮುಖ ಅಧಿಕಾರವನ್ನು ಹೊಂದಿದೆ. ಇದು ಟಾಟಾ ಗ್ರೂಪ್‌ನ ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಶೇ. 65.9ರಷ್ಟು ಪಾಲು ಹೊಂದಿದೆ. ಇದರಲ್ಲಿ ಶೇ. 12.87ರಷ್ಟು ಪಾಲನ್ನು ಹಲವಾರು ಟಾಟಾ ಗ್ರೂಪ್ ಕಂಪನಿಗಳು ಹೊಂದಿವೆ ಮತ್ತು ಶೇ.18.4ರಷ್ಟು ಶಾಪೂರ್ಜಿ ಪಲ್ಲೋಂಜಿ ಕುಟುಂಬದ ಒಡೆತನದಲ್ಲಿದೆ. ಟಾಟಾ ಸನ್ಸ್ ಗ್ರಾಹಕ ಸರಕು, ಹೊಟೇಲ್‌, ಆಟೋಮೊಬೈಲ್‌ ಮತ್ತು ಏರ್‌ಲೈನ್‌ಗಳಂತಹ ಉದ್ಯಮಗಳು ಸೇರಿ ಒಟ್ಟು 30 ಕಂಪನಿಗಳನ್ನು ನೋಡಿಕೊಳ್ಳುತ್ತದೆ.

ಟಾಟಾ ಟ್ರಸ್ಟ್ 14 ಟ್ರಸ್ಟ್‌ಗಳನ್ನು ನಿರ್ವಹಿಸುತ್ತಿರುವ ಮುಖ್ಯ ಸಂಸ್ಥೆ. ಇದು ಟಾಟಾ ಸನ್ಸ್ ಅನ್ನು ನಿಯಂತ್ರಿಸುತ್ತದೆ. ಎರಡು ಪ್ರಮುಖ ಟ್ರಸ್ಟ್‌ಗಳಾದ ಸರ್ ದೊರಾಬ್ಜಿ ಟಾಟಾ ಟ್ರಸ್ಟ್ ಮತ್ತು ಸರ್ ರತನ್ ಟಾಟಾ ಟ್ರಸ್ಟ್‌ಗಳು ಟಾಟಾ ಸನ್ಸ್‌ನ ಶೇ. 50ಕ್ಕಿಂತ ಹೆಚ್ಚು ಮಾಲೀಕತ್ವವನ್ನು ಹೊಂದಿವೆ.

ಟಾಟಾ ಟ್ರಸ್ಟ್ ಅನ್ನು ನೇರವಾಗಿ ಟಾಟಾ ಸನ್ಸ್ ನಿರ್ವಹಿಸದಿದ್ದರೂ ರತನ್ ಟಾಟಾ ಅವರ ಅಧ್ಯಕ್ಷತೆಯಲ್ಲಿ ನೇಮಕಗೊಂಡ ಕಾರ್ಯಕಾರಿ ಸಮಿತಿಯ ಮೂಲಕ ನಿರ್ವಹಿಸಲಾಗುತ್ತದೆ. ಈ ಸಮಿತಿಯಲ್ಲಿ ವೇಣು ಶ್ರೀನಿವಾಸನ್, ವಿಜಯ್ ಸಿಂಗ್ ಮತ್ತು ಮೆಹ್ಲಿ ಮಿಸ್ತ್ರಿ ಇದ್ದಾರೆ. ಟಾಟಾ ಟ್ರಸ್ಟಿಗಳು ಟಾಟಾ ಸನ್ಸ್‌ನ ಮಂಡಳಿಯ ಸದಸ್ಯರಲ್ಲಿ ಮೂರನೇ ಒಂದು ಭಾಗವನ್ನು ಹೊಂದಿದ್ದಾರೆ. ಅವರು ಪ್ರಮುಖ ನಿರ್ಧಾರಗಳ ಮೇಲೆ ತಡೆ ನೀಡುವ ಅಧಿಕಾರ ಹೊಂದಿದ್ದಾರೆ.

Noel Tata

ನೋಯೆಲ್ ಟಾಟಾ ಆಯ್ಕೆಯಾಗಿದ್ದು ಹೇಗೆ?

2012ರಲ್ಲಿ ರತನ್ ಟಾಟಾ ಅವರು ನಿವೃತ್ತಿ ಹೊಂದುತ್ತಿರುವಾಗ ಟಾಟಾ ಸನ್ಸ್ ಅನ್ನು ಮುನ್ನಡೆಸಲು ನೋಯೆಲ್ ಟಾಟಾ ಅವರನ್ನು ಸಂಭಾವ್ಯ ಅಭ್ಯರ್ಥಿ ಎಂದು ಪರಿಗಣಿಸಲಾಗಿತ್ತು. ಆದರೆ ಅವರ ಭಾವ ಸೈರಸ್ ಮಿಸ್ತ್ರಿ ಅವರನ್ನು ಆ ಸ್ಥಾನಕ್ಕೆ ಆಯ್ಕೆ ಮಾಡಲಾಯಿತು. 2016 ರಲ್ಲಿ ರತನ್ ಟಾಟಾ ಮತ್ತು ಮಿಸ್ತ್ರಿ ನಡುವಿನ ವಿವಾದದ ಅನಂತರ ಮಿಸ್ತ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಯಿತು. ಬಳಿಕ ನಟರಾಜನ್ ಚಂದ್ರಶೇಖರನ್ ಆ ಸ್ಥಾನಕ್ಕೆ ನೇಮಕವಾದರು. ಮಿಸ್ತ್ರಿ ಅವರು 2022ರಲ್ಲಿ ಕಾರು ಅಪಘಾತದಲ್ಲಿ ನಿಧನ ಹೊಂದಿದ್ದಾರೆ.

Noel Tata : ಟಾಟಾ ಟ್ರಸ್ಟ್‌ ಅಧ್ಯಕ್ಷರಾಗಿ ನೋಯೆಲ್‌ ಟಾಟಾ ನೇಮಕ

ಮುಂಬೈನಲ್ಲಿ ನಡೆದ ಸಭೆಯಲ್ಲಿ ಟಾಟಾ ಟ್ರಸ್ಟ್‌ನ ಮುಖ್ಯಸ್ಥರಾಗಿ ನೋಯೆಲ್ ಟಾಟಾ ಅವರನ್ನು “ಅವಿರೋಧವಾಗಿ” ಆಯ್ಕೆ ಮಾಡಲಾಗಿದೆ. ಟಾಟಾ ಕಾರ್ಯನಿರ್ವಾಹಕರ ಪ್ರಕಾರ, ಟಾಟಾ ಗ್ರೂಪ್ ನ ಹಲವಾರು ಹಿರಿಯ ಸದಸ್ಯರು ಅವರ ನೇಮಕಾತಿಯನ್ನು ಬೆಂಬಲಿಸಿದರು ಎನ್ನಲಾಗಿದೆ.