ರಾಯಪುರ: ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ನಡೆಯುವ ಜ. 22 ರಂದು ರಾಜ್ಯದಲ್ಲಿ ಮದ್ಯ ಮಾರಾಟ ವನ್ನು ನಿಷೇಧಿಸಲಾಗಿದೆ ಎಂದು ಛತ್ತೀಸಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ತಿಳಿಸಿದ್ದಾರೆ.
‘ನಿಮಗೆಲ್ಲಾ ತಿಳಿದಿರುವ ಹಾಗೆ, ಡಿ.25ರಿಂದ ಜನವರಿ 2ರವರೆಗೆ ನಾವು ಉತ್ತಮ ಆಡಳಿತ ಸಪ್ತಾಹವನ್ನಾಗಿ ಆಚರಿಸುತ್ತಿದ್ದೇವೆ. ರಾಮ ರಾಜ್ಯವೇ ನಮ್ಮ ಆಡಳಿತದ ಆದರ್ಶ’ ಎಂದು ವಿಷ್ಣು ಸಾಯಿ ಅವರು ಹೇಳಿದ್ದಾರೆ.
ಛತ್ತೀಸಗಢ ಪ್ರಭು ರಾಮನ ತಾಯಿಯ ಪೂರ್ವಜರ ಭೂಮಿ ಎನ್ನುವುದು ನಮ್ಮ ಅದೃಷ್ಟ. ಜ. 22ರಂದು ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿರುವುದೂ ನಮ್ಮ ಅದೃಷ್ಟ. ಛತ್ತೀಸಗಢದಾದ್ಯಂತ ಸಂತಸವಿದೆ. ಸಮಾರಂಭಕ್ಕಾಗಿ ರಾಜ್ಯದ ಅಕ್ಕಿ ಗಿರಣಿಗಾರರ ಸಂಘವು 300 ಮೆಟ್ರಿಕ್ ಟನ್ ಸುಗಂಧಭರಿತ ಅಕ್ಕಿಯನ್ನು ಅಯೋಧ್ಯೆಗೆ ಕಳುಹಿಸಿದೆ. ರಾಜ್ಯದ ಸಾಗುವಳಿದಾರರು ತರಕಾರಿಯನ್ನು ರವಾನಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
‘ಜನವರಿ 22ರಂದು ರಾಜ್ಯದಾದ್ಯಂತ ಹಬ್ಬದ ವಾತಾವರಣ ಇರಲಿದೆ. ದೀಪಾವಳಿಯ ಹಾಗೆ ದೀಪಗಳನ್ನು ಹಚ್ಚಲಾಗುತ್ತದೆ. ಆ ದಿನ ಮದ್ಯ ಮಾರಾಟ ನಿಷೇಧ ಮಾಡಲು ಸರ್ಕಾರ ನಿರ್ಧರಿಸಿದೆ’ ಎಂದು ಅವರು ತಿಳಿಸಿದ್ದಾರೆ.