Wednesday, 11th December 2024

ರಾಜ್ಯಸಭೆಯಲ್ಲಿ 30 ನಿಮಿಷಗಳ ನಮಾಜ್‌ ರದ್ದು: ಜಗದೀಪ್‌ ಧನ್ಕರ್‌

ನವದೆಹಲಿ: ರಾಜ್ಯಸಭೆಯಲ್ಲಿ ರೂಢಿಯಾಗಿ ನಡೆದುಕೊಂಡು ಬಂದಿದ್ದ ಶುಕ್ರವಾರ ಮಧ್ಯಾಹ್ನದ ಅರ್ಧ ಗಂಟೆಯ ನಮಾಜ್‌ ಬ್ರೇಕ್‌ ಅನ್ನು ಉಪರಾಷ್ಟ್ರಪತಿ, ರಾಜ್ಯಸಭಾ ಅಧ್ಯಕ್ಷ ಜಗದೀಪ್‌ ಧನ್ಕರ್‌ ರದ್ದುಪಡಿಸಿದ್ದಾರೆ.

ಶುಕ್ರವಾರದ ಸದನದ ಸಮಯವನ್ನು ಲೋಕಸಭೆಯ ಸಮಯಕ್ಕೆ ಹೊಂದಿಸುವಂತೆ ಬದಲಾಯಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಾಮಾನ್ಯವಾಗಿ ಶುಕ್ರವಾರ ರಾಜ್ಯಸಭೆಯಲ್ಲಿ ಕಲಾಪ 2.30ಕ್ಕೆ ಆರಂಭವಾಗುತ್ತಿತ್ತು. ಆದರೆ, ಈ ಬಾರಿ 2 ಗಂಟೆಗೆ ನಿಗದಿ ಮಾಡಿರುವ ಬಗ್ಗೆ ಡಿಎಂಕೆ ಸಂಸದ ತಿರುಚಿ ಎನ್. ಶಿವ ಅವರು ಸದನದಲ್ಲಿ ಪ್ರಶ್ನೆ ಮಾಡಿದ್ದರು. ರಾಜ್ಯ ಸಭೆಯಲ್ಲಿನ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಗಳ ಪ್ರಕಾರ, ಮುಸ್ಲಿಂ ರಾಜ್ಯಸಭಾ ಸದಸ್ಯರು ನಮಾಜ್‌ ಮಾಡಲು ಅನುವು ಮಾಡಿಕೊಡಲು ಶುಕ್ರವಾರ 30 ನಿಮಿಷಗಳ ಹೆಚ್ಚುವರಿ ಭೋಜನ ವಿರಾಮವನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದರು.

ರಾಜ್ಯಸಭೆಯ ಕಲಾಪಗಳು ಬೆಳಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಮಧ್ಯಾಹ್ನ 2ರಿಂದ ಸಂಜೆ 6ರವರೆಗೆ ನಡೆಯುತ್ತದೆ. ಮಧ್ಯಾಹ್ನ 1ರಿಂದ 2 ರವರೆಗೆ ಭೋಜನ ವಿರಾಮವಿರುತ್ತದೆ. ಆದರೆ, ಶುಕ್ರವಾರ ಮಾತ್ರ 2 ಗಂಟೆಯ ಬದಲಾಗಿ 2.30ಕ್ಕೆ ಕಲಾಪ ಆರಂಭವಾಗುತ್ತಿತ್ತು. ಈ ಬಗ್ಗೆ ಎಲ್ಲೂ ಉಲ್ಲೇಖ ವಿಲ್ಲದಿದ್ದರೂ, ಶುಕ್ರವಾರದ ನಮಾಜ್‌ಗಾಗಿ 30 ನಿಮಿಷಗಳ ಹೆಚ್ಚುವರಿ ಭೋಜನ ವಿರಾಮವನ್ನು ನೀಡಲಾಗುತ್ತಿತ್ತು.

“ಶುಕ್ರವಾರದ ಸಮಯವನ್ನು ಲೋಕಸಭೆಯ ಸಮಯದೊಂದಿಗೆ ಮರುಹೊಂದಿಸಲಾಗಿದೆ. ಲೋಕಸಭೆಯಲ್ಲಿ ನಮಾಜ್ ಬ್ರೇಕ್‌ ಶುಕ್ರವಾರ ಇಲ್ಲ. ಇದು ರಾಜ್ಯಸಭೆಯಲ್ಲಿ ಇದ್ದ ಅಭ್ಯಾಸ ಮಾತ್ರವೇ ಆಗಿತ್ತು. ಲೋಕಸಭೆ ಎಲ್ಲಾ ದಿನಗಳಲ್ಲೂ ಮಧ್ಯಾಹ್ನ 2 ಗಂಟೆಗೆ ಆರಂಭವಾಗುತ್ತದೆ. ಲೋಕಸಭೆ ಹಾಗೂ ರಾಜ್ಯ ಸಭೆ ಎರಡೂ ಸಂಸತ್ತಿನ ಪ್ರಮುಖ ಭಾಗಗಳು. ಇಲ್ಲಿನ ಸಮಯ ಹಾಗೂ ನಿಮಯಗಳಿಗೆ ಎರಡೂ ಅನುಗುಣವಾಗಿರಬೇಕು. ನಾನೇ ಈ ಮೊದಲು ಹೇಳಿದಂತೆ ಶುಕ್ರವಾರವೂ ಮಧ್ಯಾಹ್ನ 2 ಗಂಟೆಗೆ ಕಲಾಪ ಆರಂಭವಾಗುತ್ತದೆ. ಇದು ಇಂದಿನದಲ್ಲ” ಎಂದು ತಿಳಿಸಿದರು.