Wednesday, 9th October 2024

ಕೃಷಿ ಕಾನೂನು ರದ್ದಿಗೆ ಅಕ್ಟೋಬರ್ 2 ಡೆಡ್‌’ಲೈನ್‌: ಟಿಕಾಯತ್

ನವದೆಹಲಿ: ಕೃಷಿ ಕಾನೂನುಗಳ ವಿಚಾರದಲ್ಲಿ ರೈತ ಸಂಘಟನೆಗಳು ಕೇಂದ್ರ ಸರ್ಕಾರಕ್ಕೆ ಅಕ್ಟೋಬರ್ 2ರವರೆಗೂ ಕಾಲಾವಕಾಶ ನೀಡಿವೆ.

ಬೇಡಿಕೆ ಕೇಳುವವರೆಗೂ ಮತ್ತು ಮೂರು ಕೃಷಿ ಕಾನೂನುಗಳು ರದ್ದಾಗದೆ ಮನೆಗಳಿಗೆ ವಾಪಸ್ ಹೋಗಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ.

ಗಾಜಿಪುರ ಪ್ರತಿಭಟನಾ ಸ್ಥಳದಲ್ಲಿ ಮಾತನಾಡಿ, ಕೃಷಿ ಕಾನೂನುಗಳನ್ನು ರದ್ದುಪಡಿಸಲು ಅಕ್ಟೋಬರ್ 2ರವರೆಗೂ ಸರ್ಕಾರಕ್ಕೆ ಕಾಲಾವಕಾಶ ನೀಡಿದ್ದೇವೆ. ನಂತರ ಮುಂದಿನ ಯೋಜನೆ ಮಾಡುತ್ತೇವೆ. ಒತ್ತಡದಲ್ಲಿ ಸರ್ಕಾರದ ಜೊತೆಗೆ ಮಾತುಕತೆ ನಡೆಸಲ್ಲ ಎಂದು ಹೇಳಿದರು. ಕನಿಷ್ಠ ಬೆಂಬಲ ಬೆಲೆಯಲ್ಲಿ ಬೆಳೆ ಖರೀದಿಗೂ ಕಾನೂನು ರೂಪಿಸಬೇಕೆಂದು ಒತ್ತಾಯಿಸಿದರು.

ರೈತ ಸಂಘಟನೆಗಳು ದೇಶಾದ್ಯಂತ ಚಕ್ಕ ಜಾಮ್ ಪ್ರತಿಭಟನೆಯನ್ನು ನಡೆಸಿದವು. ದೆಹಲಿ ಹಾಗೂ ಸುತ್ತಮುತ್ತ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ಸೂಕ್ತ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.

ಕೃಷಿ ಕಾನೂನುಗಳ ರದ್ದತಿಗೆ ಸಂಬಂಧಿಸಿದಂತೆ ಹನ್ನೊಂದು ಸುತ್ತಿನ ಮಾತುಕತೆಗಳು ನಡೆದಿದ್ದು, 18 ತಿಂಗಳ ಕಾಲ ನೂತನ ಕೃಷಿ ಕಾನೂನುಗಳನ್ನು ಅನುಷ್ಠಾನಗೊಳಿಸುವುದಿಲ್ಲ ಎಂದು ಸರ್ಕಾರ ಹೇಳಿದೆ. ಆದರೆ, ರೈತ ಸಂಘಟನೆಗಳು ನೂತನ ಕೃಷಿ ಕಾನೂನುಗಳನ್ನು ರದ್ದುಗೊಳಿಸಲೇಬೇಕೆಂದು ಪಟ್ಟು ಹಿಡಿದಿದ್ದು, ಪ್ರತಿಭಟನೆ ನಡೆಸುತ್ತಿವೆ.