Thursday, 3rd October 2024

Odisha Horror: ಠಾಣೆಯಲ್ಲಿ ಯೋಧನ ಭಾವಿ ಪತ್ನಿಯ ಕೈ ಕಾಲು ಕಟ್ಟಿ ಚಿತ್ರಹಿಂಸೆ- ಪೊಲೀಸರ ಹೀನ ಕೃತ್ಯ ಬಿಚ್ಚಿಟ್ಟ ಸಂತ್ರಸ್ತೆ

odisha Horror

ಭುವನೇಶ್ವರ: ರಕ್ಷಕರೇ ಭಕ್ಷಕರಾದಾಗ ಎಂಥಾ ಘೋರ ಘಟನೆ ನಡೆಯತ್ತದೆ ಎಂಬುದಕ್ಕೆಈ ಘಟನೆ ಉತ್ತಮ ನಿದರ್ಶನ. ಸಹಾಯಕ್ಕಾಗಿ ಪೊಲೀಸ್‌ ಠಾಣೆಗೆ ತೆರಳಿದ್ದ ಯೋಧ ಮತ್ತು ಆತನ ಭಾವಿ ಪತ್ನಿ ಮೇಲೆ ಪೊಲೀಸರೇ ಹಲ್ಲೆ ನಡೆಸಿ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಭೀಕರ ಘಟನೆ ಒಡಿಶಾ(Odisha Horror)ದಲ್ಲಿ ಬೆಳಕಿಗೆ ಬಂದಿದೆ. ಸೆ.14ರಂದು ನಡೆದಿರುವ ಈ ಘಟನೆ ಬಹಳ ತಡವಾಗಿ ಬೆಳಕಿಗೆ ಬಂದಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿರುವ ಸಂತ್ರಸ್ತೆ ತಾನು ಅನುಭವಿಸಿದ ನರಕಯಾತನೆಯನ್ನು ಮಾಧ್ಯಮದೆದುರು ಬಿಚ್ಚಿಟ್ಟಿದ್ದಾಳೆ. ಈ ಘಟನೆ ದೇಶಾದ್ಯಂತ ಬಹಳ ದೊಡ್ಡ ಮಟ್ಟದಲ್ಲಿ ಇದೀಗ ಸುದ್ದಿ ಮಾಡುತ್ತಿದೆ.

ಏನಿದು ಘಟನೆ?

ಭುವನೇಶ್ವರದ ಭಾರತ್‌ಪುರ ಪೊಲೀಸ್‌ ಠಾಣೆಯಲ್ಲಿ ಈ ಘಟನೆ ನಡೆದಿದ್ದು, ಆರ್ಮಿ ಆಫೀಸರ್ ಮತ್ತು ಆತನ ಭಾವಿ ಪತ್ನಿ ಕಾರಿನಲ್ಲಿ ಸೆ.14ರಂದು ರಾತ್ರಿ ಭುವನೇಶ್ವರದಿಂದ ತಮ್ಮ ಮನೆಗೆ ವಾಪಾಸಾಗುತ್ತಿದ್ದ ವೇಳೆ ಗೂಂಡಾಗಳು ಅವರನ್ನು ಬೆನ್ನಟ್ಟಿದ್ದಾರೆ. ಭಯಭೀತರಾದ ದಂಪತಿ ವೇಗವಾಗಿ ಕಾರು ಓಡಿಸಿಕೊಂಡು ಹತ್ತಿರದ ಪೊಲೀಸ್‌ ಠಾಣೆಗೆ ನುಗ್ಗಿ ಸಹಾಯಕ್ಕಾಗಿ ಬೇಡಿದ್ದಾರೆ. ಆದರೆ ಆ ರಾತ್ರಿ ದುಸ್ವಪ್ನವಾಗಿ ಕಾಡುತ್ತದೆ ಎಂಬ ಕನಿಷ್ಟ ಊಹೆಯೂ ಅವರಿಬ್ಬರಿಗಿರಲಿಲ್ಲ.

ನಡುರಾತ್ರಿ ಪೊಲೀಸ್‌ ಠಾಣೆಗೆ ಬಂದ ಈ ಜೋಡಿಯ ಮೇಲೆ ಪೊಲೀಸರು ಸರಿಯಾಗಿ ಥಳಿಸಿದ್ದಾರೆ. ಅಲ್ಲದೇ ಯುವತಿಯ ಕಾಲುಗಳನ್ನು ಶಾಲಿನಿಂದ ಮತ್ತು ಕೈಗಳನ್ನು ಜಾಕೆಟ್‌ನಿಂದ ಕಟ್ಟಿದ ಪೊಲೀಸರು ಆಕೆಯ ಮೇಲೆ ಮನಸ್ಸೋಇಚ್ಛೆ ಥಳಿಸಿದ್ದಾಳೆ. ಅಲ್ಲದೇ ಕೂದಲು ಹಿಡಿದು ನೆಲದಲ್ಲಿ ಧರ ಧರನೇ ಎಳೆದಾಡಿದ್ದು, ಲೈಂಗಿಕ ಕಿರುಕುಳವನ್ನೂ ನೀಡಿದ್ದಾರೆ. ಜತೆಗಿದ್ದ ಆರ್ಮಿ ಆಫೀಸರ್‌ನನ್ನು ಲಾಕ್‌ಅಪ್‌ನಲ್ಲಿ ಕೂಡಿ ಹಾಕಿದ್ದರು. ಎಷ್ಟೇ ಬೇಡಿಕೊಂಡರೂ ಬಿಡದೇ ಆಕೆಯ ಮೇಲೆ ಪೊಲೀಸರು ಕ್ರೂರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಕೊನೆಗೆ ಮಹಿಳೆಯ ವಿರುದ್ಧವೇ ದೂರು ದಾಖಲಿಸಿದ್ದರು.

ಈ ವಿಚಾರ ತಿಳಿಯುತ್ತಿದ್ದಂತೆ ಭಾರತೀಯ ಸೇನೆ, ಒಡಿಶಾ ಸರ್ಕಾರದ ಗಮನಕ್ಕೆ ತಂದಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಸರ್ಕಾರ ಈ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿ, ಉತ್ನತ ತನಿಖೆಗೆ ಆದೇಶಿಸಿತ್ತು. ಈ ವಿಚಾರ ರಾಷ್ಟ್ರವ್ಯಾಪಿ ಸುದ್ದಿಯಾಗುತ್ತಿದ್ದಂತೆ ಬರ್ತಾಪುರ ಪೊಲೀಸ್‌ ಸ್ಟೇಶನ್‌ ಇನ್‌ಸ್ಪೆಕ್ಟರ್‌ ಸೇರಿದಂತೆ ಒಟ್ಟು ಐವರು ಪೊಲೀಸರನ್ನು ಸಸ್ಪೆಂಡ್‌ ಮಾಡಲಾಗಿದೆ. ಇದೀಗ ಮಹಿಳೆಗೆ ಹೈಕೋರ್ಟ್‌ನಿಂದ ಜಾಮೀನು ಸಿಕ್ಕಿದ್ದು, ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ. ಆಕೆಯ ಮುಖ, ಹೊಟ್ಟೆ, ಎದೆಗೆ ಗಂಭೀರ ಗಾಯಗಳಾಗಿವೆ.

ಈ ಸುದ್ದಿಯನ್ನೂ ಓದಿ: MP Horror: ಪಿಕ್‌ನಿಕ್‌ಗೆ ತೆರಳಿದ್ದ ಸೇನೆಯ ಇಬ್ಬರು ಅಧಿಕಾರಿಗಳ ಮೇಲೆ ಡೆಡ್ಲಿ ಅಟ್ಯಾಕ್‌; ಜತೆಗಿದ್ದ ಸ್ನೇಹಿತೆ ಮೇಲೆ ಗ್ಯಾಂಗ್‌ರೇಪ್‌