Saturday, 14th December 2024

ವಿಪಕ್ಷಗಳು ಲೋಕಸಭೆಯ 272 ಸ್ಥಾನಗಳಲ್ಲಿ ಸ್ಪರ್ಧಿಸಿಲ್ಲ: ಪ್ರಧಾನಿ ಮೋದಿ ಕಿಡಿ

ವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳ ವಿರುದ್ಧ ಕಿಡಿಕಾರಿದ್ದು, ಬಿಜೆಪಿ ಹೊರತುಪಡಿಸಿ, ಇನ್ಯಾವುದೇ ವಿರೋಧ ಪಕ್ಷಗಳು ಲೋಕಸಭೆಯ 272 ಸ್ಥಾನಗಳಲ್ಲಿ ಸ್ಪರ್ಧಿಸಿಲ್ಲ. ಸರ್ಕಾರ ರಚಿಸಲು 272 ಸ್ಥಾನಗಳ ಅಗತ್ಯವಿದೆ ಎಂದು ಹೇಳಿದರು.

ಗುಜರಾತ್‌ ನ ದೀಶಾದಲ್ಲಿ ಮುಂಬರುವ 3ನೇ ಹಂತದ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಾರ್ವಜನಿಕ ಸಮಾರಂಭ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಒಂದು ವೇಳೆ ನಿಮಗೆ ಸರ್ಕಾರ ರಚಿಸುವ ಬಯಕೆ ಇದ್ದಿದ್ದರೆ, ಕನಿಷ್ಠ 272 ಸ್ಥಾನಗಳ ಅಗತ್ಯವಿದೆ. ಆದರೆ ಬಿಜೆಪಿ ಹೊರತುಪಡಿಸಿ, ಇತರ ಯಾವುದೇ ರಾಜಕೀಯ ಪಕ್ಷ ದೇಶದ 272 ಸ್ಥಾನಗಳಲ್ಲಿ ಸ್ಪರ್ಧಿಸಿಲ್ಲ. ಆದರೂ ತಾವೇ ಸರ್ಕಾರ ರಚಿಸುವುದಾಗಿ ವಿಪಕ್ಷಗಳು ಹೇಳುತ್ತಿವೆ ಎಂದು ವ್ಯಂಗ್ಯ ವಾಡಿದರು.

ದೆಹಲಿಯ ಐಶಾರಾಮಿ ಕುಟುಂಬಗಳು ಕೂಡಾ ಕಾಂಗ್ರೆಸ್‌ ಗೆ ಮತ ಹಾಕಲ್ಲ, ಅಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಇಲ್ಲ. ಭರೂಛ್‌ ನಲ್ಲಿ ಅಹ್ಮದ್‌ ಪಟೇಲ್‌ ಕುಟುಂಬ ಕಾಂಗ್ರೆಸ್‌ ಗೆ ಮತ ಹಾಕಲ್ಲ. ಭಾವ್‌ ನಗರದಲ್ಲಿಯೂ ದೊಡ್ಡ ಕಾಂಗ್ರೆಸ್‌ ಮುಖಂಡರಿಗೆ ಕಾಂಗ್ರೆಸ್‌ ಗೆ ಮತ ಹಾಕಲು ಸಾಧ್ಯವಾಗುತ್ತಿಲ್ಲ. ಇದು ಗುಜರಾತ್‌ ನಲ್ಲಿ ಕಾಂಗ್ರೆಸ್‌ ನ ಸ್ಥಿತಿ ಎಂದು ಮೋದಿ ಟೀಕಿಸಿದರು.

2014ರಲ್ಲಿ ಟೀ ಮಾರಾಟಗಾರ ಎಂದು ಕಾಂಗ್ರೆಸ್‌ ಪಕ್ಷ ನನ್ನ ಟೀಕಿಸಿತ್ತು. ಆದರೆ ಅದಕ್ಕೆ ದೇಶದ ಜನ ತಕ್ಕ ಉತ್ತರ ನೀಡಿದ್ದಾರೆ. ದೇಶದಲ್ಲಿ 400 ಸ್ಥಾನ ಗಳಿಸಿದ್ದ ಕಾಂಗ್ರೆಸ್‌ ಪಕ್ಷ ಇಂದು ಕೇವಲ 40ಕ್ಕೆ ಕುಸಿದಿದೆ ಎಂದು ಕುಹಕವಾಡಿದರು.