Friday, 13th December 2024

IAS: ಐಎಎಸ್‌ನಲ್ಲಿ 1,316, ಐಪಿಎಸ್‌ನಲ್ಲಿ 794 ಹುದ್ದೆ ಖಾಲಿ ಇದೆ: ರಾಜ್ಯಸಭೆಗೆ ಕೇಂದ್ರ ಸರ್ಕಾರ ಮಾಹಿತಿ

ನವದೆಹಲಿ: ಭಾರತೀಯ ಆಡಳಿತ ಸೇವೆ (ಐಎಎಸ್)(IAS)ಯಲ್ಲಿ 1,316 ಮತ್ತು ಭಾರತೀಯ ಪೊಲೀಸ್ (Indian Police) ಸೇವೆ (ಐಪಿಎಸ್) (IPS)ಯಲ್ಲಿ 586 ಹುದ್ದೆಗಳು ಖಾಲಿ ಇವೆ ಎಂದು ಗುರುವಾರ ರಾಜ್ಯಸಭೆ(Rajya Sabha)ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಈ ಕುರಿತು ಕೇಂದ್ರದ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ (Jitendra Singh)​ ಅವರು ರಾಜ್ಯಸಭೆಗೆ ಲಿಖಿತ ವರದಿ ನೀಡಿದ್ದಾರೆ. ದೇಶದಲ್ಲಿ ಭಾರತೀಯ ಆಡಳಿತ ಸೇವೆಯ ವಿಭಾಗದಲ್ಲಿ (ಐಎಎಸ್) 6,858 ಹುದ್ದೆಗಳ ಪೈಕಿ 5,542 ಭರ್ತಿ ಮಾಡಲಾಗಿದ್ದು, ಭಾರತೀಯ ಪೊಲೀಸ್ ಸೇವೆಯ (ಐಪಿಎಸ್) 5,055 ಹುದ್ದೆಗಳಲ್ಲಿ 4,469 ಭರ್ತಿ ಮಾಡಲಾಗಿದೆ ಎಂಬ ಮಾಹಿತಿ ಹಂಚಿಕೊಂಡಿದ್ದಾರೆ.

ಸದ್ಯ ಖಾಲಿ ಇರುವ 1,316 ಐಎಎಸ್ ಹುದ್ದೆಗಳ ಪೈಕಿ 794 ನೇರ ನೇಮಕಾತಿ ಮತ್ತು 522 ಪದೋನ್ನತಿ ಮೂಲಕ ನೇಮಕಾತಿ ನಡೆಯಲಿದ್ದು, ಖಾಲಿ ಇರುವ 586 ಐಪಿಎಸ್ ಹುದ್ದೆಗಳಲ್ಲಿ 209 ನೇರ ನೇಮಕಾತಿ ಮತ್ತು 377 ಬಡ್ತಿ ಮೂಲಕ ಭರ್ತಿ ಮಾಡಬೇಕಿದೆ ಎಂದು ಸಚಿವರು ಹೇಳಿದ್ದಾರೆ.

ಅದರಂತೆ ಭಾರತೀಯ ಅರಣ್ಯ ಸೇವೆ (IFS)ಯ 3,193 ಹುದ್ದೆಗಳ ಪೈಕಿ 2,151 ಸ್ಥಾನಗಳನ್ನು ಭರ್ತಿ ಮಾಡಲಾಗಿದೆ. ಈ ಇಲಾಖೆಯಲ್ಲಿ ಸದ್ಯ 1,042 ಹುದ್ದೆಗಳು ಖಾಲಿ ಇವೆ. ಇವುಗಳಲ್ಲಿ 503 ನೇರ ನೇಮಕಾತಿ ಮತ್ತು 539 ಪದೋನ್ನತಿ ಮೂಲಕ ಭರ್ತಿ ಮಾಡಬೇಕಿದೆ ಎಂದು ಮಾಹಿತಿ ನೀಡಿದ್ದಾರೆ.

ಮೀಸಲಾತಿವಾರು ಹುದ್ದೆಗಳ ಭರ್ತಿ

ಸರ್ಕಾರ ನೀಡಿದ ವಿವರಗಳಲ್ಲಿ ಕಳೆದ ಐದು ವರ್ಷಗಳಲ್ಲಿ ಮೀಸಲಾತಿ ಅನ್ವಯ ಮಾಡಿದ ಭರ್ತಿ ಬಗ್ಗೆಯೂ ಮಾಹಿತಿ ಇದೆ. 2022ರ ನಾಗರಿಕ ಸೇವಾ ಪರೀಕ್ಷೆಯ (CSE) ವೇಳೆ ಐಎಎಸ್​ ಹುದ್ದೆಗೆ 75 ಸಾಮಾನ್ಯ, 45 ಒಬಿಸಿ, 29 ಎಸ್​ಸಿ ಮತ್ತು 13 ಎಸ್​​ಟಿ ಮೀಸಲಾತಿ ನೀಡಲಾಗಿದೆ. ಅದೇ ಅವಧಿಯಲ್ಲಿ ಐಪಿಎಸ್‌ನಲ್ಲಿ 83 ಸಾಮಾನ್ಯ, 53 ಒಬಿಸಿ, 31 ಎಸ್‌ಸಿ ಮತ್ತು 13 ಎಸ್‌ಟಿ ನೇಮಕಾತಿ ನಡೆದಿದೆ. ಐಎಫ್‌ಎಸ್‌ನಲ್ಲಿ ಒಟ್ಟು 43 ಸಾಮಾನ್ಯ, 51 ಒಬಿಸಿ, 22 ಎಸ್‌ಸಿ ಮತ್ತು 11 ಎಸ್‌ಟಿ ನೇಮಕಾತಿಗಳನ್ನು ಮಾಡಲಾಗಿದೆ ಎಂದಿದೆ.

ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ)ವು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಪ್ರತಿ ವರ್ಷ ಐಎಎಸ್, ಐಪಿಎಸ್ ಮತ್ತು ಐಎಫ್‌ಎಸ್ ಸೇರಿದಂತೆ ಹಲವು ಹುದ್ದೆಗಳಿಗೆ ನೇಮಕಾತಿ ನಡೆಸುತ್ತದೆ.

ಈ ಸುದ್ದಿಯನ್ನೂ ಓದಿ: Indian Light Tank: ಉನ್ನತ ಹಂತದ ಫೈರಿಂಗ್ ಟೆಸ್ಟ್ ಪಾಸ್ ಮಾಡಿದ ಸ್ವದೇಶಿ ನಿರ್ಮಿತ ಲಘು ಯುದ್ಧ ಟ್ಯಾಂಕ್