Saturday, 14th December 2024

ಪದ್ಮಶ್ರೀ ಪುರಸ್ಕೃತ ಪರಿಸರವಾದಿ ರಾಧಾಮೋಹನ್ ನಿಧನ

ಭುವನೇಶ್ವರ: ಪದ್ಮಶ್ರೀ ಪುರಸ್ಕೃತ ಪರಿಸರವಾದಿ, ಒಡಿಶಾದ ಮಾಜಿ ಮಾಹಿತಿ ಆಯುಕ್ತ ಪ್ರೊ. ರಾಧಾಮೋಹನ್ (78) ಅವರು ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾಗಿದ್ದಾರೆ.

ಅವರಿಗೆ ಮೂವರು ಪುತ್ರಿಯರಿದ್ದಾರೆ. ನ್ಯುಮೋನಿಯಾದಿಂದ ಬಳಲುತ್ತಿದ್ದ ರಾಧಾ ಮೋಹನ್ ಅವರಿಗೆ ಕೆಲವು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಗಾಂಧಿವಾದಿ ರಾಧಾ ಮೋಹನ್ ಅವರ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮತ್ತು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಸಂತಾಪ ಸೂಚಿಸಿದ್ದಾರೆ.

ರಾಷ್ಟ್ರ‍ಪತಿ ರಾಮ್‌ನಾಥ್ ಕೋವಿಂದ್ ಅವರು, ಬಹುದೊಡ್ಡ ವಿದ್ವಾಂಸರಾಗಿದ್ದ ಅವರು ಪ್ರಕೃತಿ ಮತ್ತು ಮಾನವೀಯ ತೆಯನ್ನು ಶ್ರೀಮಂತಗೊಳಿಸಲು ಸಾವಯವ ಕೃಷಿಯತ್ತ ಹೆಜ್ಜೆ ಹಾಕಿದರು’ ಎಂದು ಟ್ವೀಟ್‌ ಮಾಡಿದ್ದಾರೆ.

ನಯಾಗಡ ಜಿಲ್ಲೆಯ ಪುಟ್ಟ ಹಳ್ಳಿಯೊಂದರಲ್ಲಿ 1943ರಲ್ಲಿ ಜನಿಸಿದ ರಾಧಾಮೋಹನ್ ಪುರಿಯ ಎಸ್‌ಸಿಎಸ್‌ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದು, ಅಪ್ಲೈಡ್ ಎಕನಾಮಿಕ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಪದವಿ ಕಲಿತ ಪುರಿಯ ಎಸ್‌ಸಿಎಸ್‌ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ ನಿವೃತ್ತಿಯಾದ ನಂತರ, ರಾಜ್ಯ ಸರ್ಕಾರ ಇವರನ್ನು ಮಾಹಿತಿ ಆಯುಕ್ತರನ್ನಾಗಿ ನೇಮಿಸಿತ್ತು.

ಒಡಿಶಾದ ನಯಾಗಡ ಜಿಲ್ಲೆಯಲ್ಲಿರುವ ಬರಡು ಭೂಮಿಯನ್ನು ಮೂವತ್ತು ವರ್ಷಗಳ ಕಾಲ ಹಸಿರಾಗಿಸಿದ ಪ್ರೊ. ರಾಧಾ ಮೋಹನ್ ಮತ್ತು ಅವರ ಪುತ್ರಿ ಸಬರಮತಿ ಇಬ್ಬರಿಗೂ ಕಳೆದ ವರ್ಷ ಭಾರತದ ಸರ್ಕಾರ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಿತ್ತು.

ರಾಧಾ ಮೋಹನ್ ಅವರು ಪರಿಸರ ಸೇವೆಯನ್ನು ಗೌರವಿಸಿದ ವಿಶ್ವ ಸಂಸ್ಥೆ (ಯುಎನ್‌ಇಪಿ) ‘ದಿ ಗ್ಲೋಬಲ್ ರೋಲ್ ಆಫ್ ಆನರ್’ ನೀಡಿ ಗೌರವಿಸಿತ್ತು. ಒಡಿಶಾ ಸರ್ಕಾರ ಪ್ರೊಫೆಸರ್ ಅವರ ಅತ್ಯುತ್ತಮ ಸಾಮಾಜಿಕ ಸೇವೆಗಾಗಿ ‘ಉಟ್ಕಲ್ ಸೇವಾ ಸಮ್ಮಾನ್’ ಪ್ರಶಸ್ತಿ ನೀಡಿ ಗೌರವಿಸಿತ್ತು.