Wednesday, 11th December 2024

ಪಾಕ್​ ನುಸುಳುಕೋರನ ಗುಂಡಿಕ್ಕಿ ಹತ್ಯೆ

ಜಮ್ಮು ಮತ್ತು ಕಾಶ್ಮೀರ: ಸಾಂಬಾ ಪ್ರದೇಶದಲ್ಲಿ ಗಡಿ ಭದ್ರತಾ ಪಡೆ ಎಚ್ಚರಿಕೆ ನೀಡಿದ ನಂತರವೂ ಒಳ ನುಸುಳಲು ಯತ್ನಿಸಿದ ಪಾಕಿಸ್ತಾನ​ ಪ್ರಜೆಯನ್ನು ಗಡಿ ಭದ್ರತಾ ಪಡೆಗಳು ಗುಂಡಿಕ್ಕಿ ಹತ್ಯೆ ಮಾಡಿವೆ.

ಸಾಂಬಾ ಸೆಕ್ಟರ್‌ನಲ್ಲಿರುವ ಅಂತಾರಾಷ್ಟ್ರೀಯ ಗಡಿಯನ್ನು ಪಾಕಿಸ್ತಾನದ ಕಡೆಯಿಂದ ನುಸುಳಲು ಯತ್ನಿಸಿದಾಗ ಘಟನೆ ನಡೆದಿದೆ.

ಅನುಮಾನಾಸ್ಪದ ಚಲನವಲನ ಪತ್ತೆ ಹಚ್ಚಿದ ಸೇನೆ ಆತನಿಗೆ ಮೊದಲು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಆದರೆ ಉಲ್ಲಂಘಿಸಿದ ವ್ಯಕ್ತಿ ಮುನ್ನುಗ್ಗಿ ಬಂದಾಗ ಬಿಎಸ್‌ಎಫ್​ ಗುಂಡು ಹಾರಿಸಿ ಆತನನ್ನು ಹೊಡೆದುರುಳಿಸಿದ್ದಾರೆ ಎಂದು ಸೇನಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಏಪ್ರಿಲ್​ 5 ರಂದು ನುಸುಳುಕೋರನನ್ನು ಬಿಎಸ್​ಎಫ್​ ಬಂಧಿಸಿತ್ತು. ಆರೋಪಿ ಗಡಿಯಲ್ಲಿ ಅಳವಡಿಸಲಾಗಿದ್ದ ತಂತಿ ಬೇಲಿ ದಾಟಿ ಭಾರತ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ. ಗಡಿಯಲ್ಲಿ ಎಚ್ಚರಿಕೆವಹಿಸಿ ಗಸ್ತು ತಿರುಗುತ್ತಿದ್ದ ಬಿಎಸ್‌ಎಫ್ ಸಿಬ್ಬಂದಿ ತಕ್ಷಣ ಆತನನ್ನು ಸೆರೆ ಹಿಡಿದಿದ್ದಾರೆ. ಬಿಒಪಿ ಬಳಿಯ ಗೇಟ್​ನಿಂದ ಕೆಳಗಿಳಿದ ಕೂಡಲೇ ಆತ ಸಿಕ್ಕಿಬಿದ್ದಿದ್ದಾನೆ. ಪಾಕಿಸ್ತಾನದ ನಗರ್‌ಪಾರ್ಕರ್‌ನ ನಿವಾಸಿ ದಯಾರಾಮ್ ಎಂದು ಆತನನ್ನು ಗುರುತಿಸಲಾಗಿದೆ.

ಜನವರಿ 3, 2023 ರಂದು ಭಾರತ-ಪಾಕ್​ ಅಂತಾರಾಷ್ಟ್ರೀಯ ಗಡಿಯಲ್ಲಿ ಗಡಿ ಭದ್ರತಾ ಪಡೆ ಪಾಕಿಸ್ತಾನಿ ನುಸುಳುಕೋರನನ್ನು ಗುಂಡು ಹಾರಿಸಿ ಹತ್ಯೆಗೈದಿತ್ತು.