Friday, 13th December 2024

PF Withdrawal Limit: ಪಿಎಫ್‌ ಖಾತೆದಾರರಿಗೆ ಗುಡ್‌ನ್ಯೂಸ್‌; ವಿತ್‌ಡ್ರಾ ಮಿತಿ 1 ಲಕ್ಷ ರೂ.ಗೆ ಏರಿಕೆ

PF Withdrawal Limit

ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಚಂದಾದಾರರಿಗೆ ಗುಡ್‌ನ್ಯೂಸ್‌ ನೀಡಿದೆ. ಇದೀಗ ಪಿಎಫ್‌ ವಿತ್‌ಡ್ರಾ ಮಿತಿಯನ್ನು 1,00,000 ರೂ.ಗೆ ಏರಿಸಲಾಗಿದೆ (PF Withdrawal Limit). ʼʼಈ ಹಿಂದಿದ್ದ 50,000 ರೂ. ಮಿತಿಯನ್ನು 1 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆʼʼ ಎಂದು ಕೇಂದ್ರ ಕಾರ್ಮಿಕ ಸಚಿವ ಮನಸುಖ್ ಮಾಂಡವೀಯ (Mansukh Mandaviya) ತಿಳಿಸಿದ್ದಾರೆ.

“ನೀವು ಇಪಿಎಫ್ಒ ಚಂದಾದಾರರಾಗಿದ್ದರೆ ತುರ್ತು ಪರಿಸ್ಥಿತಿಯಲ್ಲಿ ಇನ್ನುಮುಂದೆ ಹೆಚ್ಚಿನ ಮೊತ್ತವನ್ನು ಹಿಂಪಡೆಯಬಹುದು” ಎಂದು ಮಾಂಡವಿಯಾ ಪ್ರಕಟಿಸಿದ್ದಾರೆ. ನೌಕರರ ಭವಿಷ್ಯ ನಿಧಿ ಸಂಸ್ಥೆ ಭಾರತದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ಬರುವ ಶಾಸನಬದ್ಧ ಸಂಸ್ಥೆಯಾಗಿದೆ. ಇದರ ಜತೆಗೆ ಮನಸುಖ್ ಮಾಂಡವೀಯ ಅವರು ಚಂದಾದಾರರಿಗೆ ಅನುಕೂಲವಾಗುವ ಇನ್ನಷ್ಟು ಹೊಸ ನಿಯಮ ಪ್ರಕಟಿಸಿದ್ದಾರೆ.

6 ತಿಂಗಳು ಕೆಲಸ ಮಾಡಬೇಕಾಗಿಲ್ಲ

ಇಪಿಎಫ್‌ ಅಕೌಂಟ್‌ನಿಂದ ಹಣವನ್ನು ಹಿಂಪಡೆಯಲು ಉದ್ಯೋಗಿಯು ಯಾವುದೇ ಕಂಪನಿ/ಸಂಸ್ಥೆಯಲ್ಲಿ ಕನಿಷ್ಠ ಆರು ತಿಂಗಳಾದರೂ ಸೇವೆ ಸಲ್ಲಿಸಿರಬೇಕು ಎಂಬ ಈ ಹಿಂದಿನ ನಿರ್ಬಂಧವನ್ನೂ ಸರ್ಕಾರ ತೆಗೆದು ಹಾಕಿದೆ. ʼʼನೀವು ಕೆಲಸಕ್ಕೆ ಸೇರಿದ ಒಂದೆರಡು ತಿಂಗಳಿನಲ್ಲೇ ಅಗತ್ಯವಿದ್ದರೆ ಹಣ ವಿತ್‌ಡ್ರಾ ಮಾಡಬಹುದಾಗಿದೆ. ತುರ್ತು ಅಗತ್ಯದ ಸಂದರ್ಭದಲ್ಲಿ ಫಲಾನುಭವಿಗಳಿಗೆ ಅನುಕೂಲ ಒದಗಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆʼʼ ಎಂದು ಅವರು ತಿಳಿಸಿದ್ದಾರೆ.

“ಈ ಹಿಂದೆ ನೀವು ಹಣ ಹಿಂಪಡೆಯಲು ಹೆಚ್ಚು ಸಮಯ ಕಾಯಬೇಕಾಗಿತ್ತು. ಆದರೆ ಇದೀಗ ಪಿಎಫ್ ಕೊಡುಗೆದಾರರು ಕೆಲಸಕ್ಕೆ ಸೇರಿದ ಆರು ತಿಂಗಳ ಒಳಗೆ ಬೇಕಾದರೂ ಹಣ ವಿತ್‌ಡ್ರಾ ಮಾಡಬಹುದುʼʼ ಎಂದು ಅವರು ವಿವರಿಸಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ 100 ದಿನ ಪೂರೈಸಿದ ಹಿನ್ನಲೆಯಲ್ಲಿ ಈ ಕೊಡಗೆಯನ್ನು ಪ್ರಕಟಿಸಲಾಗಿದೆ. ಪಿಎಫ್‌ ಮೊತ್ತವನ್ನು ಹಿಂಪಡೆಯುವ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸುವ ಉದ್ದೇಶದಿಂದ ಹೊಸ ತಂತ್ರಜ್ಞಾನ ಪರಿಚಯಿಸುವ ಉದ್ದೇಶವೂ ಇದೆ ಎಂದೂ ಸಚಿವರು ತಿಳಿಸಿದ್ದಾರೆ.

ಯಾವಾಗೆಲ್ಲ ಹಣ ಹಿಂಪಡೆಯಬಹುದು?

ಪಿಎಫ್‌ ನಿವೃತ್ತಿ ಉಳಿತಾಯ ಯೋಜನೆಯಾಗಿದ್ದರೂ ಕೆಲವೊಂದು ಸಂದರ್ಭದಲ್ಲಿ ಹಣವನ್ನು ಹಿಂಪಡೆಯಬಹುದು. ವೈದ್ಯಕೀಯ ತುರ್ತು ಪರಿಸ್ಥಿತಿ, ಮದುವೆ, ಶಿಕ್ಷಣ, ನಿರುದ್ಯೋಗ, ಮನೆ ನವೀಕರಣ ಮುಂತಾದ ಸಂದರ್ಭಗಳಲ್ಲಿ ಪಿಎಫ್‌ ಹಣವನ್ನು ಹಿಂಪಡೆಯಬಹುದಾಗಿದೆ.

ಇ-ನಾಮಿನೇಷನ್‌ ಮಾಡಿಕೊಂಡಿರುವ ಪಿಎಫ್‌ ಸದಸ್ಯರು ತಮ್ಮ ಖಾತೆಯಿಂದ ಒಂದಷ್ಟು ಮೊತ್ತ, ಅಡ್ವಾನ್ಸ್‌ ಮತ್ತು ಪೆನ್ಶನ್‌ ಪಡೆಯಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ಇಪಿಎಫ್‌ಒ ವೆಬ್‌ಸೈಟ್‌ ಅಥವಾ ಉಮಾಂಗ್ ಆ್ಯಪ್‌ ಬಳಸಬಹುದು. ಅರ್ಜಿ ಸಲ್ಲಿಸ ಬಳಿಕ ಕ್ಲೈಮ್ ಅನ್ನು ಅನುಮೋದನೆಗಾಗಿ ಉದ್ಯೋಗದಾತರಿಗೆ ಕಳುಹಿಸಲಾಗುತ್ತದೆ. ಅನುಮೋದನೆಯ ನಂತರ ಮೊತ್ತವನ್ನು ಚಂದಾದಾರರ ಖಾತೆಗೆ ಜಮೆ ಮಾಡಲಾಗುತ್ತದೆ.

ಇಪಿಎಫ್‌ ಖಾತೆಯ ವೈಶಿಷ್ಟ್ಯ

  • ಉದ್ಯೋಗಿಗಳ ಕೊಡುಗೆ ಸಾಮಾನ್ಯವಾಗಿ ಮೂಲ ವೇತನದ ಶೇ. 12ರಷ್ಟಿರುತ್ತದೆ.
  • ಉದ್ಯೋಗದಾತರ ಕೊಡುಗೆ ನಿಮ್ಮ ಮೂಲ ವೇತನ ಮತ್ತು ತುಟ್ಟಿಭತ್ಯೆಯ ಶೇ. 12ಕ್ಕೆ ಸಮನಾಗಿರುತ್ತದೆ. ಉದ್ಯೋಗದಾತರ ಕೊಡುಗೆಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ: ಅವೆಂದರೆ- ಇಪಿಎಫ್ ಮತ್ತು ನೌಕರರ ಪಿಂಚಣಿ ಯೋಜನೆ(ಇಪಿಎಸ್).
  • ಇದು ಭಾರತದಲ್ಲಿ ಕಡ್ಡಾಯ.
  • ಕೇಂದ್ರ ಸರ್ಕಾರವು ಪ್ರತಿ ವರ್ಷ ನಿರ್ದಿಷ್ಟ ಪ್ರಮಾಣದಲ್ಲಿ ಬಡ್ಡಿ ಒದಗಿಸುತ್ತದೆ. 2023-24ರ ಹಣಕಾಸು ವರ್ಷದಲ್ಲಿ ಶೇ. 8.25ರಷ್ಟು ಬಡ್ಡಿ ವಿಧಿಸಲಾಗುತ್ತದೆ.

ಈ ಸುದ್ದಿಯನ್ನೂ ಓದಿ: Stock Market: ಷೇರು ಮಾರುಕಟ್ಟೆಯಲ್ಲಿ ಸಂಚಲನ; ಗರಿಷ್ಠ ಮಟ್ಟ ತಲುಪಿದ ಸೆನ್ಸೆಕ್ಸ್, ನಿಫ್ಟಿ