Saturday, 30th November 2024

Physical abuse: ಮಲ ಮಗಳ ಮೇಲೆ ನಿರಂತರ ಅತ್ಯಾಚಾರ ಎಸಗಿದ ವ್ಯಕ್ತಿಗೆ 141 ವರ್ಷ ಜೈಲು ಶಿಕ್ಷೆ

Physical abuse

ತಿರುವನಂತಪುರಂ: ಹೆಂಡತಿ ಮನೆಯಲ್ಲಿ ಇಲ್ಲದಿದ್ದಾಗ ತನ್ನ ಅಪ್ರಾಪ್ತ ಮಲಮಗಳ ಮೇಲೆ ಹಲವು ವರ್ಷಗಳ ಕಾಲ ನಿರಂತವಾಗಿ ಅತ್ಯಾಚಾರ (Physical abuse) ಎಸಗಿದ ಆರೋಪದ ಮೇಲೆ ಕೇರಳದ (Kerala) ಮಂಜೇರಿ ವಿಶೇಷ ಪೋಕ್ಸೊ ನ್ಯಾಯಾಲಯ ವ್ಯಕ್ತಿಯೊಬ್ಬನಿಗೆ ಬರೋಬ್ಬರಿ 141 ವರ್ಷಗಳ ಜೈಲು ಶಿಕ್ಷೆ ಹಾಗೂ 7.85 ಲಕ್ಷ ರೂ. ದಂಡ ವಿಧಿಸಿದೆ.

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ, ಐಪಿಸಿ ಮತ್ತು ಬಾಲಾಪರಾಧ ನ್ಯಾಯ ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಮಂಜೇರಿ ಫಾಸ್ಟ್ ಟ್ರಾಕ್ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಶ್ರಫ್ ಎ.ಎಂ. ಅವರು ಆರೋಪಿಗೆ 141 ವರ್ಷಗಳವರೆಗೆ ವಿವಿಧ ಅವಧಿಗಳ ಜೈಲು ಶಿಕ್ಷೆಯನ್ನು ವಿಧಿಸಿದ್ದಾರೆ.

ಮಲಪ್ಪುರಂ ಮಹಿಳಾ ಪೊಲೀಸರು 2021ರಲ್ಲಿ ದಾಖಲಿಸಿದ ಪ್ರಕರಣದ ಪ್ರಕಾರ, ಆರೋಪಿಯು ನಾಲ್ಕು ವರ್ಷಗಳ ಕಾಲ ತನ್ನ ಮಲಮಗಳ ಮೇಲೆ ದೌರ್ಜನ್ಯ ಮತ್ತು ಅತ್ಯಾಚಾರ ಎಸಗಿದ್ದಾನೆ. ಮಹಿಳಾ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ರಾಸಿಯಾ ಬೆಂಗಾಲ್ ನೇತೃತ್ವದಲ್ಲಿ ತನಿಖೆ ನಡೆಸಲಾಗಿದ್ದು, ಸಬ್ ಇನ್ಸ್‌ಪೆಕ್ಟರ್ ಪಿ.ವಿ.ಸಿಂಧು ಅವರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಅಪರಾಧಿ ಮತ್ತು ಸಂತ್ರಸ್ತೆ ತಮಿಳುನಾಡು ಮೂಲದವರಾಗಿದ್ದು, ಮಲತಂದೆ 2017ರಿಂದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಎಂಬುದು ತಿಳಿದು ಬಂದಿತ್ತು. ಅಪರಾಧಿ ತಾನು ಅತ್ಯಾಚಾರ ನಡೆಸಿರುವ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿದ್ದ. ಅಂತಿಮವಾಗಿ ತನ್ನ ಸ್ನೇಹಿತೆಯ ಸಲಹೆಯ ಮೇರೆಗೆ ಸಂತ್ರಸ್ತ ಬಾಲಕಿ ತಾಯಿ ಬಳಿ ಹೇಳಿಕೊಂಡಿದ್ದಳು. ನಂತರ ವ್ಯಕ್ತಿಯ ಮೇಲೆ ದೂರು ದಾಖಲಿಸಲಾಗಿತ್ತು. ಇದೀಗ ತೀರ್ಪು ಬಂದಿದ್ದು, ಆತನಿಗೆ ನ್ಯಾಯಾಲಯ 141 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.

ಪ್ರತ್ಯೇಕ ಪ್ರಕರಣದಲ್ಲಿ ಇತ್ತೀಚೆಗೆ ಉತ್ತರ ಪ್ರದೇಶದ ಅಪ್ರಾಪ್ತ ಬಾಲಕನೊಬ್ಬ 5 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಬಜಾರ್​ ಖಾಲಾ ಪ್ರದೇಶದಲ್ಲಿ ನಡೆದಿದೆ.

ಆರೋಪಿ ಬಾಲಕ ಚಿಪ್ಸ್​ ಪ್ಯಾಕೆಟ್ ಕೊಡಿಸುವ ನೆಪದಲ್ಲಿ ಬಾಲಕಿ ಕರೆದುಕೊಂಡು ಹೋಗಿದ್ದಾನೆ. ಬಹಳ ಸಮಯವಾದರೂ ಮಗಳು ಮನೆಗೆ ಬಾರದೇ ಇದ್ದುದನ್ನು ಕಂಡ ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದಾರೆ. ಪಕ್ಕದ ಮನೆಯಿಂದ ಬಾಲಕಿ ಅಳುವುದು ಕೇಳಿ ಮನೆಯವರು ಬಾಗಿಲು ಒಡೆದು ಒಳ ನುಗ್ಗಿದ್ದಾರೆ. ಸ್ಥಳೀಯರು ಆರೋಪಿ ಬಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಸುದ್ದಿಯನ್ನೂ ಓದಿ: Physical Abuse: ವಿದ್ಯಾರ್ಥಿನಿಯನ್ನು ಕರೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿದ ನಾಲ್ವರು ಶಿಕ್ಷಕರು!