ಮಧ್ಯಪ್ರದೇಶ: ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಗಣೇಶಪುರ ಗ್ರಾಮದಲ್ಲಿ ಮಹಿಳೆಯೊಬ್ಬಳು ರಾಶಿ ರಾಶಿ ಪಿಸ್ತೂಲ್ಗಳನ್ನು ನೀರಿನಲ್ಲಿ ತೊಳೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ ಬೆನ್ನಲ್ಲೇ ವಿಡಿಯೋ ಬೆನ್ನತ್ತಿದ ಪೊಲೀಸರು ಅಕ್ರಮ ಪಿಸ್ತೂಲ್ ದಂಧೆ ನಡೆಸುತ್ತಿದ್ದವರ ಸಂಪೂರ್ಣ ಜಾಲವನ್ನು ಪತ್ತೆಹಚ್ಚಿ, ಅಕ್ರಮವಾಗಿ ತೆರೆದಿದ್ದ ಪಿಸ್ತೂಲ್ ಕಾರ್ಖಾನೆಯನ್ನು ಕೂಡ ಮುಚ್ಚಿಸಿದ್ದಾರೆ.
ಪಿಸ್ತೂಲ್ಗಳನ್ನು ಶುಭ್ರವಾಗಿ ಕಾಣುವಂತೆ ತೊಳೆಯುತ್ತಿದ್ದ ಮಹಿಳೆ, ಆಕೆಯ ಪತಿ ಮತ್ತು ಮಾವನನ್ನು ಇದೀಗ ಪೊಲೀಸರು ಅಕ್ರಮ ಪಿಸ್ತೂಲ್ ದಂಧೆ ಪ್ರಕರಣದಲ್ಲಿ ಬಂಧಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ವಿಡಿಯೋ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದು ಮೊರೆನಾ ಜಿಲ್ಲೆಯ ಪೊಲೀಸರ ಕಣ್ಣಿಗೆ ಬಿದ್ದಿದ್ದೇ ತಡ ತಮ್ಮ ತಂಡದೊಂದಿಗೆ ಚುರುಕು ತನಿಖೆ ಕೈಗೊಂಡ ಅಧಿಕಾರಿಗಳು, ಇದೀಗ ಅಕ್ರಮದ ಜಾಲವನ್ನು ಪತ್ತೆಹಚ್ಚಿ, ಆರೋಪಿಗಳನ್ನು ಕಂಬಿ ಎಣಿಸುವಂತೆ ಮಾಡಿದ್ದಾರೆ.
ಪೊಲೀಸರು ಶಂಕಿತ ಫ್ಯಾಕ್ಟರಿ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ. ಈ ವೇಳೆ ಮಹಿಳೆಯ ಪತಿ ಶಕ್ತಿ ಕಪೂರ್ ಸಖ್ವಾರ್ ಮತ್ತು ಆಕೆಯ ಮಾವ ಬಿಹಾರಿ ಲಾಲ್, ತಾವು ಅಕ್ರಮವಾಗಿ ಸಾಗಿಸಲು ವ್ಯವಸ್ಥೆ ಮಾಡಿಕೊಂಡಿದ್ದ ಶಸ್ತ್ರಾಸ್ತ್ರಗಳೊಂದಿಗೆ ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ, ಅಷ್ಟರೊಳಗೆ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿದ್ದಾರೆ. ದಾಳಿಯಲ್ಲಿ ಪೊಲೀಸರು ಶಕ್ತಿ ಕಪೂರ್‌ಗೆ ಸೇರಿದ 315 ಬೋರ್ ಮತ್ತು 32 ಬೋರ್ ಪಿಸ್ತೂಲ್‌ಗಳು ಸೇರಿದಂತೆ ಅರೆ ತಯಾರಿಸಿದ ಬಂದೂಕುಗಳ ದೊಡ್ಡ ಸಂಗ್ರಹವನ್ನು ವಶಪಡಿಸಿಕೊಂಡಿದ್ದಾರೆ.
ಶಕ್ತಿ ಕಪೂರ್ ಮತ್ತು ಬಿಹಾರಿಲಾಲ್ ಸಖ್ವಾರ್ ಇಬ್ಬರನ್ನೂ ಅಂಬಾ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಪೊಲೀಸರು, ಕೋರ್ಟ್ ಆದೇಶದಂತೆ ಬಿಹಾರಿಲಾಲ್ನನ್ನು ಜೈಲಿಗೆ ಕಳುಹಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ, ಅಕ್ರಮ ಶಸ್ತ್ರಾಸ್ತ್ರಗಳ ಜಾಲ ಎಲ್ಲೆಲ್ಲಿದೆ? ಎಲ್ಲಿಗೆ ಇದನ್ನೆಲ್ಲಾ ರವಾನಿಸು ತ್ತಿದ್ದೀರಿ? ಎಂದು ಅಧಿಕಾರಿಗಳು ಆರೋಪಿಗಳಿಗೆ ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ. ಸದ್ಯ ಈ ಪ್ರಕರಣದ ತನಿಖೆ ಮುಂದುವರೆದಿದೆ