Wednesday, 11th December 2024

ಆಂಧ್ರಪ್ರದೇಶಕ್ಕೆ ಪ್ರಧಾನಿ ಜುಲೈ 4ರಂದು ಭೇಟಿ

ನವದೆಹಲಿ: ಆಂಧ್ರಪ್ರದೇಶದ ಭೀಮಾವರಂಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಭೇಟಿ ನೀಡಲಿದ್ದು, ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸೀತಾರಾಮ ರಾಜು ಅವರ 125 ನೇ ಜನ್ಮ ದಿನಾಚರಣೆಗೆ ಚಾಲನೆ ನೀಡಲಿದ್ದಾರೆ.

ರಾಜು ಅವರ 30 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸ ಲಿದ್ದಾರೆ. ನಂತರ ಗಾಂಧಿನಗರದಲ್ಲಿ ಡಿಜಿಟಲ್ ಇಂಡಿಯಾ ವೀಕ್ 2022 ಅನ್ನು ಉದ್ಘಾಟಿಸಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ ಹೇಳಿಕೆ ತಿಳಿಸಿದೆ.

ಜುಲೈ 4, 1897 ರಂದು ಜನಿಸಿದ ರಾಜು ಅವರು ಪೂರ್ವ ಘಟ್ಟಗಳ ಪ್ರದೇಶದ ಬುಡಕಟ್ಟು ಸಮುದಾಯಗಳ ಹಿತಾಸಕ್ತಿಗಳನ್ನು ಕಾಪಾಡುವ ಸಲುವಾಗಿ ಬ್ರಿಟಿಷರ ವಿರುದ್ಧದ ಹೋರಾಟ ಮಾಡಿದ್ದರು. 1922 ರಲ್ಲಿ ಪ್ರಾರಂಭವಾದ ರಾಂಪಾ ದಂಗೆಯ ನೇತೃತ್ವ ವಹಿಸಿದ್ದರು. ಸ್ಥಳೀಯ ಜನರು ಅವರನ್ನು ‘ಮಾನ್ಯಂ ವೀರುಡು’ ಎಂದು ಕರೆಯುತ್ತಾರೆ. ಒಂದು ವರ್ಷದ ಆಚರಣೆಯ ಭಾಗವಾಗಿ ಸರ್ಕಾರವು ಹಲವಾರು ಉಪಕ್ರಮಗಳನ್ನು ಯೋಜಿಸಿದೆ.

ರಾಂಪಾ ಬಂಡಾಯಕ್ಕೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಚಿಂತಪಲ್ಲಿ ಪೊಲೀಸ್ ಠಾಣೆಯ ಮೇಲಿನ ದಾಳಿ ಆರಂಭವಾದ ವಿಜಯನಗರ ಜಿಲ್ಲೆಯ ಪಂಡ್ರಂಗಿಯಲ್ಲಿರುವ ರಾಜು ಅವರ ಜನ್ಮಸ್ಥಳ ಹಾಗೂ ಪೊಲೀಸ್ ಠಾಣೆಯನ್ನು ಮರುಸ್ಥಾಪಿಸ ಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಮೊಗಲ್ಲುವಿನಲ್ಲಿ ಅಲ್ಲೂರಿ ಧ್ಯಾನ ಮಂದಿರವನ್ನು ಧ್ಯಾನ ಮುದ್ರೆಯಲ್ಲಿ ರಾಜು ಪ್ರತಿಮೆಯೊಂದಿಗೆ ನಿರ್ಮಿಸಲು ಸರ್ಕಾರವು ಅನುಮೋದನೆ ನೀಡಿದೆ. ಬಳಿಕ ಗುಜರಾತಿನ ಗಾಂಧಿನಗರದಲ್ಲಿ, ಪ್ರಧಾನ ಮಂತ್ರಿಗಳು ಡಿಜಿಟಲ್ ಇಂಡಿಯಾ ವೀಕ್ 2022 ಅನ್ನು ಉದ್ಘಾಟಿಸಲಿದ್ದಾರೆ. ಪ್ರಧಾನಿ ಮೋದಿ ಅವರು ‘ಡಿಜಿಟಲ್ ಇಂಡಿಯಾ ಭಾಷಿನಿ’ ಅನ್ನು ಪ್ರಾರಂಭಿಸಲಿದ್ದಾರೆ.