Tuesday, 15th October 2024

ಗಡಿವಿವಾದ ಇತ್ಯರ್ಥಕ್ಕೆ ಪ್ರಧಾನಿ ಮಧ್ಯ ಪ್ರವೇಶಿಸಲಿ: ಅಜಿತ್ ಪವಾರ್

ಮುಂಬೈ: ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವೆ ದೀರ್ಘಕಾಲದಿಂದ ಇರುವ ಗಡಿವಿವಾದವನ್ನು ಇತ್ಯರ್ಥಪಡಿಸಲು ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸಬೇಕು’ ಎಂದು ಎನ್‌ಸಿಪಿ ನಾಯಕ, ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಒತ್ತಾಯಿಸಿದ್ದಾರೆ.

ಆಗಸ್ಟ್ 9ರಂದು ಪ್ರಧಾನಿ ಅವರಿಗೆ ಪವಾರ್ ಪತ್ರ ಬರೆದಿದ್ದು, ‘ಮರಾಠಿ ಮಾತನಾಡುವ ಜನರ ಮೇಲಿನ ಕರ್ನಾಟಕ ಸರ್ಕಾರದ ‘ದೌರ್ಜನ್ಯ’ವನ್ನು ನಿಲ್ಲಿಸಿ ಹಾಗೂ ಕರ್ನಾಟಕದ ವಿವಾದಿತ ಪ್ರದೇಶಗಳನ್ನು ರಾಜ್ಯಕ್ಕೆ ಸೇರಿಸಬೇಕು’ ಎಂದೂ ಮನವಿ ಮಾಡಿದ್ದಾರೆ.

‘ಮಹಾರಾಷ್ಟ್ರ ರಾಜ್ಯ ರಚನೆ, ಮುಂಬೈ ಅದರ ರಾಜಧಾನಿಯಾಗಿ 60 ವರ್ಷಗಳಾಗಿವೆ. ಬೆಳಗಾವಿ, ಕಾರವಾರ, ಬೀದರ್, ಭಾಲ್ಕಿ, ನಿಪ್ಪಾಣಿ ಸೇರಿದಂತೆ ಕರ್ನಾಟಕದಲ್ಲಿ ಮರಾಠಿ ಮಾತನಾಡುವ ಜನರಿರುವ ಪ್ರದೇಶಗಳು ಇನ್ನೂ ಮಹಾರಾಷ್ಟ್ರಕ್ಕೆ ಸೇರಿಲ್ಲ ಎಂದು ಪತ್ರದಲ್ಲಿ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ಮರಾಠಿ ಮಾತನಾಡುವ ಪ್ರದೇಶಗಳು ಸೇರಿದಂತೆ ‘ಸಂಯುಕ್ತ ಮಹಾರಾಷ್ಟ್ರ’ದ ಕನಸು ನನಸಾಗುವವರೆಗೂ ಮಹಾರಾಷ್ಟ್ರ ವಿಶ್ರಾಂತಿ ಪಡೆಯುವುದಿಲ್ಲ.

ಕರ್ನಾಟಕದ ಬೆಳಗಾವಿ, ಕಾರವಾರ ಮತ್ತು ನಿಪ್ಪಾಣಿ ಸೇರಿದಂತೆ ಕೆಲವು ಪ್ರದೇಶಗಳನ್ನು ಮಹಾರಾಷ್ಟ್ರ ತನಗೆ ಸೇರಿದ್ದು ಎಂದು ಹೇಳಿಕೊಂಡಿದೆ. ಈ ಪ್ರದೇಶ ಗಳಲ್ಲಿ ಹೆಚ್ಚಿನ ಜನರು ಮರಾಠಿ ಮಾತನಾಡುವವರಾಗಿದ್ದಾರೆ. ಬೆಳಗಾವಿ ಮತ್ತು ಇತರ ಗಡಿ ಪ್ರದೇಶಗಳ ಕುರಿತು ಉಭಯ ರಾಜ್ಯಗಳ ನಡುವಿನ ವಿವಾದವು ಹಲವು ವರ್ಷಗಳಿಂದ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ.