Monday, 14th October 2024

PM Modi Birthday : 74ನೇ ಹುಟ್ಟುಹಬ್ಬಕ್ಕೆ ಪ್ರಧಾನಿ ಮೋದಿಯ ದಿನಚರಿ ಹೇಗಿರಲಿದೆ? ಇಲ್ಲಿದೆ ಎಲ್ಲ ವಿವರ

Narendra Modi

ಬೆಂಗಳೂರು : ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿಯವರ 74 ನೇ ಹುಟ್ಟುಹಬ್ಬ (PM Modi Birthday) ಸಂಭ್ರಮಾಚರಣೆ ನಡೆಯಲಿದೆ.  ಈ ದಿನದಂದು ಅವರು ಅನೇಕ ಚಟುವಟಿಕೆಗಳಲ್ಲಿ ಭಾಗಿಯಾಗಲಿದ್ದಾರೆ. ಅವರ ಬರ್ತ್‌ಡೇ ದಿನ ಕಾರ್ಯಕ್ರಮಗಳು ಮೂರು ನಗರಗಳನ್ನು ವ್ಯಾಪಿಸಲಿದೆ. ಧಾರ್ಮಿಕ, ರಾಜಕೀಯ ಮತ್ತು ಸಾಮಾಜಿಕ ಚಟುವಟಿಕೆಗಳ ಮಿಶ್ರಣವಾಗಿರುತ್ತದೆ.

ವಾರಾಣಸಿಯಲ್ಲಿ ಆರಂಭ

ಮೋದಿ ಅವರ ಜನ್ಮದಿನದ ಕಾರ್ಯಕ್ರಮ ಅವರ ಲೋಕಸಭಾ ಕ್ಷೇತ್ರವಾದ ವಾರಾಣಸಿಯಲ್ಲಿ ಪ್ರಾರಂಭವಾಗಲಿದೆ. ಅಲ್ಲಿ ವಿಶ್ವ ಪ್ರಸಿದ್ಧ ವಿಶ್ವನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ. ಆ ಮೂಲಕ ಅವರು ದಿನವನ್ನು ಆರಂಭಿಸಲಿದ್ದಾರೆ. ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡುತ್ತಾರೆಯೇ ಎಂಬುದು ಅನಿಶ್ಚಿತವಾಗಿದ್ದರೂ ಅವರ ಭೇಟಿಯು ಹಲವಾರು ಧಾರ್ಮಿಕ ಸಮಾರಂಭಗಳಿಂದ ಕೂಡಿರಲಿದೆ.

ಒಡಿಶಾಗೆ ಪ್ರಯಾಣ

ಮಧ್ಯಾಹ್ನ, ಮೋದಿ ಒಡಿಶಾದ ಭುವನೇಶ್ವರಕ್ಕೆ ಪ್ರಯಾಣಿಸಲಿದ್ದಾರೆ. ಅಲ್ಲಿ ಅವರು ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಯೋಜನೆಯಾದ ‘ಸುಭದ್ರಾ’ಗೆ ಚಾಲನೆ ನೀಡಲಿದ್ದಾರೆ. ಅದು ಜಗನ್ನಾಥನ ಸಹೋದರಿ “ಸುಭದ್ರಾ” ಅವರ ಹೆಸರಿನಲ್ಲಿ ನೀಡಲಾಗುತ್ತದೆ. ಮುಂದಿನ ಐದು ವರ್ಷಗಳಲ್ಲಿ ಒಡಿಶಾದ 1 ಕೋಟಿಗೂ ಹೆಚ್ಚು ಮಹಿಳೆಯರಿಗೆ ವಾರ್ಷಿಕ 10,000 ರೂಪಾಯಿ ದೊರೆಯಲಿದೆ.

ನಾಗಪುರದಲ್ಲಿ ಮುಕ್ತಾಯ

ಆರ್‌ಎಸ್‌ಎಸ್‌ ಪ್ರಧಾನ ಕಚೇರಿ ಇರುವ ನಾಗ್ಪುರದಲ್ಲಿ ಪ್ರಧಾನಿ ತಮ್ಮ ಜನ್ಮದಿನವನ್ನು ಮುಕ್ತಾಯಗೊಳಿಸಲಿದ್ದಾರೆ. ಅವರು ಕಳೆದ ವರ್ಷ ತಮ್ಮ ಜನ್ಮದಿನದಂದು ಪ್ರಾರಂಭಿಸಲಾದ ಪಿಎಂ ವಿಶ್ವಕರ್ಮ ಯೋಜನೆಯ ಮೊದಲ ವಾರ್ಷಿಕೋತ್ಸವದ ಸ್ಮರಣಾರ್ಥ ಎಂಎಸ್ಎಂಇ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಈ ಪ್ರವಾಸದ ಸಮಯದಲ್ಲಿ ಮೋದಿ ಪ್ರಧಾನ ಕಚೇರಿಗೆ ಭೇಟಿ ನೀಡುತ್ತಾರೆಯೇ ಎಂಬುದು ಸ್ಪಷ್ಟವಾಗಿಲ್ಲ.

ದೇಶಾದ್ಯಂತ ಸರಣಿ ಕಾರ್ಯಕ್ರಮ

ಮೋದಿ ಅವರ ಜನ್ಮದಿನದ ಪ್ರಯುಕ್ತ ಬಿಜೆಪಿ ದೇಶಾದ್ಯಂತ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಸೆಪ್ಟೆಂಬರ್ 17 ರಿಂದ ಪ್ರಾರಂಭವಾಗುವ ಕಾರ್ಯಕ್ರಮವನ್ನು ‘ಸೇವಾ ಪಖ್ವಾರಾ’ ಅಥವಾ ‘ಸೇವಾ ಪರ್ವ್’ ಎಂದು ಗುರುತಿಸಲಾಗುತ್ತದೆ. ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಸಹಯೋಗದೊಂದಿಗೆ ಬಿಜೆಪಿ ರಾಷ್ಟ್ರವ್ಯಾಪಿ ರಕ್ತದಾನ ಶಿಬಿರ ನಡೆಸಲಿದೆ. ಹೆಚ್ಚುವರಿಯಾಗಿ, ಸೆಪ್ಟೆಂಬರ್ 18 ರಿಂದ ಪಕ್ಷವು ಆಸ್ಪತ್ರೆಗಳು ಮತ್ತು ಶಾಲೆಗಳಲ್ಲಿ ಸ್ವಚ್ಚತಾ ಅಭಿಯಾನ ನಡೆಸಲಿದೆ.

ಇದನ್ನೂ ಓದಿ: PM Modi Birthday: 800 ಕೆಜಿ ಧಾನ್ಯದಲ್ಲಿ ಅರಳಿದ ಮೋದಿ ಚಿತ್ರ; 13 ವರ್ಷದ ಬಾಲಕಿ ಸಾಧನೆಗೆ ವಿಶ್ವ ದಾಖಲೆ ಗರಿ

ಸೆಪ್ಟೆಂಬರ್ 23 ರಂದು ಭಾರತದ ಎಲ್ಲಾ 4,123 ವಿಧಾನಸಭಾ ಕ್ಷೇತ್ರಗಳಲ್ಲಿ ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ಭಾರತದ ಪ್ಯಾರಾಲಿಂಪಿಕ್ಸ್ ಕ್ರೀಡಾಪಟುಗಳನ್ನು ಗೌರವಿಸಲು ಬಿಜೆಪಿ ಯೋಜಿಸಿದೆ. ಈ ಅವಧಿಯಲ್ಲಿ ಸದಸ್ಯತ್ವ ಅಭಿಯಾನವೂ ಆಯೋಜನೆಗೊಂಡಿದೆ. ಪ್ರತಿ ಬಿಜೆಪಿ ಕಾರ್ಯಕರ್ತರಿಗೆ 100 ಹೊಸ ಸದಸ್ಯರನ್ನು ಸೇರಿಸುವ ಜವಾಬ್ದಾರಿ ನೀಡಲಾಗಿದೆ.

ಮಂಡಲ ಮಟ್ಟದಲ್ಲಿ ಆಚರಿಸಲಾಗುವ ಅಕ್ಟೋಬರ್ 2 ರಂದು ಗಾಂಧಿ ಜಯಂತಿಯೊಂದಿಗೆ ಬಿಜೆಪಿಯ ಕಾರ್ಯಕ್ರಮಗಳು ಕೊನೆಗೊಳ್ಳಲಿವೆ.