Monday, 14th October 2024

PM Modi Birthday: ಇಂದು ಪ್ರಧಾನಿ ಮೋದಿ ಹುಟ್ಟುಹಬ್ಬ; ರಾಷ್ಟ್ರಪತಿ ಸೇರಿ ಗಣ್ಯರಿಂದ ಶುಭಾಶಯಗಳ ಮಹಾಪೂರ

PM Modi Birthday

ನವದೆಹಲಿ: ಇಂದು (ಸೆಪ್ಟೆಂಬರ್‌ 17) ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಜನ್ಮದಿನ. 74ನೇ ವರ್ಷಕ್ಕೆ ಕಾಲಿಟ್ಟ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ (PM Modi Birthday). ರಾಷ್ಟ್ರಪತಿ ದ್ರೌಪರಿ ಮುರ್ಮು ಸೇರಿದಂತೆ ದೇಶ-ವಿದೇಶಗಳ ಗಣ್ಯರು, ವಿವಿಧ ಪಕ್ಷಗಳ ಮುಖಂಡರು ಶುಭ ಹಾರೈಸಿದ್ದಾರೆ.

ರಾಜ್ಯಸಭೆಯ ಪ್ರತಿಪಕ್ಷದ ನಾಯಕ, ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಶುಭಾಶಯ ತಿಳಿಸಿದ್ದಾರೆ. ʼʼಪ್ರಧಾನಿ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ದೇವರು ಆರೋಗ್ಯ, ಆಯುಷ್ಯ ನೀಡಲಿʼʼ ಎಂದು ಹಾರೈಸಿದ್ದಾರೆ. ಬಹುಜನ ಸಮಾಜ ಪಕ್ಷ (Bahujan Samaj Party)ದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರೂ ಪ್ರಧಾನಿಗೆ ಶುಭ ಕೋರಿದ್ದಾರೆ. “ಇಂದು ಜನ್ಮದಿನ ಆಚರಿಸುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೃತ್ಪೂರ್ವಕ ಶುಭಾಶಯಗಳು” ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸಂದೇಶ ಕಳುಹಿಸಿ, “ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಆರೋಗ್ಯದೊಂದಿಗೆ ಅವರ ದೀರ್ಘಾಯುಷ್ಯಕ್ಕೆ ಪ್ರಾರ್ಥಿಸುತ್ತೇನೆ” ಎಂದು ತಿಳಿಸಿದ್ದಾರೆ. ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಕೂಡ ಮೋದಿ ಅವರನ್ನು ಅಭಿನಂದಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ‘ನವ ಭಾರತದ’ ದೃಷ್ಟಿಕೋನದೊಂದಿಗೆ ಪರಂಪರೆಯಿಂದ ವಿಜ್ಞಾನದವರೆಗೆ ವಿವಿಧ ಅಂಶಗಳನ್ನು ಸಂಪರ್ಕಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಮೋದಿ ಅವರ ಬಲವಾದ ಇಚ್ಛಾಶಕ್ತಿ ಮತ್ತು ಸಾರ್ವಜನಿಕ ಕಲ್ಯಾಣದ ಬದ್ಧತೆಯು ಬಡವರ ಕಲ್ಯಾಣಕ್ಕಾಗಿ ಹೊಸ ಯೋಜನೆಗಳನ್ನು ಆರಂಭಿಸಲು ಅನುವು ಮಾಡಿಕೊಟ್ಟಿದೆ ಎಂದು ಹೇಳಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮೋದಿ ಅವರ ದೂರದೃಷ್ಟಿ ಮತ್ತು ಬಲವಾದ ನಾಯಕತ್ವವನ್ನು ಶ್ಲಾಘಿಸಿದ್ದಾರೆ. ಜತೆಗೆ ಕೇಂದ್ರ ಸಚಿವರು, ಬಿಜೆಪಿ ಮುಖಂಡರು ಕೂಡ ಶುಭಾಶಯ ತಿಳಿಸಿದ್ದಾರೆ.

ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ

ಇಂದು ಮಧ್ಯಾಹ್ನ ಒಡಿಶಾದ ಭುವನೇಶ್ವರಕ್ಕೆ ಪ್ರಯಾಣಿಸಲಿರುವ ಮೋದಿ ಅವರು ಅಲ್ಲಿ ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಯೋಜನೆಯಾದ ‘ಸುಭದ್ರಾ’ಗೆ ಚಾಲನೆ ನೀಡಲಿದ್ದಾರೆ. ಈ ಯೋಜನೆ ಮೂಲಕ ಮುಂದಿನ ಐದು ವರ್ಷಗಳಲ್ಲಿ ಒಡಿಶಾದ 1 ಕೋಟಿಗೂ ಹೆಚ್ಚು ಮಹಿಳೆಯರಿಗೆ ವಾರ್ಷಿಕ 10,000 ರೂಪಾಯಿ ದೊರೆಯಲಿದೆ. ಜತೆಗೆ 26 ಲಕ್ಷ ಪಿಎಂ ಆವಾಸ್ ಯೋಜನೆ ಮನೆಗಳನ್ನು ಉದ್ಘಾಟಿಸಲಿದ್ದಾರೆ.

ಆರ್‌ಎಸ್‌ಎಸ್‌ ಪ್ರಧಾನ ಕಚೇರಿ ಇರುವ ಮಹಾರಾಷ್ಟ್ರದ ನಾಗ್ಪುರದಲ್ಲಿ ಪ್ರಧಾನಿ ತಮ್ಮ ಜನ್ಮದಿನವನ್ನು ಮುಕ್ತಾಯಗೊಳಿಸಲಿದ್ದಾರೆ. ಅವರು ಕಳೆದ ವರ್ಷ ತಮ್ಮ ಜನ್ಮದಿನದಂದು ಪ್ರಾರಂಭಿಸಲಾದ ಪಿಎಂ ವಿಶ್ವಕರ್ಮ ಯೋಜನೆಯ ಮೊದಲ ವಾರ್ಷಿಕೋತ್ಸವದ ಸ್ಮರಣಾರ್ಥ ಎಂಎಸ್ಎಂಇ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜತೆಗೆ ಮೋದಿ ಅವರ ಜನ್ಮದಿನದ ಪ್ರಯುಕ್ತ ಬಿಜೆಪಿ ದೇಶಾದ್ಯಂತ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ನಾಳೆ (ಸೆಪ್ಟೆಂಬರ್ 18)ಯಿಂದಲೂ ಪಕ್ಷವು ವಿವಿಧ ಆಸ್ಪತ್ರೆಗಳು ಮತ್ತು ಶಾಲೆಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಿದೆ.

PM Modi Birthday: 800 ಕೆಜಿ ಧಾನ್ಯದಲ್ಲಿ ಅರಳಿದ ಮೋದಿ ಚಿತ್ರ; 13 ವರ್ಷದ ಬಾಲಕಿ ಸಾಧನೆಗೆ ವಿಶ್ವ ದಾಖಲೆ ಗರಿ