Wednesday, 11th December 2024

PM Narendra Modi: ಇಂದಿನಿಂದ ಪಿಎಂ ಮೋದಿ ಬ್ರೂನೈ ಭೇಟಿ, ಈ ದೇಶಕ್ಕೆ ತೆರಳುತ್ತಿರುವ ಮೊದಲ ಭಾರತೀಯ ಪ್ರಧಾನಿ

pm narendra modi with brunei king

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ದ್ವಿಪಕ್ಷೀಯ ಭೇಟಿಗಾಗಿ ಸೆಪ್ಟೆಂಬರ್ 3 ಮತ್ತು 4ರಂದು ಬ್ರೂನೈ (Brunei) ದೇಶಕ್ಕೆ ಪ್ರಯಾಣಿಸಿದ್ದಾರೆ. ಮೋದಿಯವರು ಇಲ್ಲಿಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಎನಿಸಲಿದ್ದಾರೆ. ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯ ವೃದ್ಧಿಗೆ ಇದೊಂದು ಮಹತ್ವದ ಹೆಜ್ಜೆ ಎಂದು ಪರಿಗಣಿಸಲಾಗಿದೆ.

“ಬ್ರುನೈ ರಾಜ ಸುಲ್ತಾನ್ ಹಸನಲ್ ಬೊಲ್ಕಿಯಾ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅವರು ಸೆಪ್ಟೆಂಬರ್ 3-4ರಂದು ಬ್ರೂನೈಗೆ ಭೇಟಿ ನೀಡಲಿದ್ದಾರೆ. ಇದು ಬ್ರೂನೈಗೆ ಭಾರತೀಯ ಪ್ರಧಾನಿಯ ಮೊದಲ ದ್ವಿಪಕ್ಷೀಯ ಭೇಟಿಯಾಗಿದೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಭಾರತ ಮತ್ತು ಬ್ರೂನೈ ನಡುವಿನ ರಾಜತಾಂತ್ರಿಕ ಬಾಂಧವ್ಯ ಸ್ಥಾಪನೆಯ 40ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರ ಭೇಟಿ ಏರ್ಪಡಿಸಲಾಗಿದೆ.

ಪ್ರಧಾನಿ ಮೋದಿ ಅವರು ಈ ಹಿಂದೆ ಬ್ಯಾಂಕಾಕ್‌ನಲ್ಲಿ ಸೆಪ್ಟೆಂಬರ್ 3, 4 ರಂದು ನಡೆಯಲಿರುವ ಬಹು-ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ (BIMSTEC) ಬೇ ಆಫ್ ಬೆಂಗಾಲ್ ಉಪಕ್ರಮದ ಆರನೇ ಶೃಂಗಸಭೆಯಲ್ಲಿ ಭಾಗವಹಿಸಲು ನಿರ್ಧರಿಸಿದ್ದರು. ಇದು ಕಳೆದ ವಾರ ದೇಶದಲ್ಲಿ ಹೊಸ ಸರ್ಕಾರ ಬಂದ ಕಾರಣ ಮುಂದೂಡಲ್ಪಟ್ಟಿದೆ.

ನವೆಂಬರ್ 2014 ರಲ್ಲಿ ಮ್ಯಾನ್ಮಾರ್‌ನಲ್ಲಿ ನಡೆದ 25 ನೇ ಆಸಿಯಾನ್ ಶೃಂಗಸಭೆಯ ಸಂದರ್ಭದಲ್ಲಿ ಸುಲ್ತಾನ ಹಸನಲ್ ಬೊಲ್ಕಿಯಾ ಸುಲ್ತಾನ್ ಅವರನ್ನು ಮೋದಿ ಭೇಟಿಯಾಗಿದ್ದರು. ಇದಾಗಿ ಹತ್ತು ವರ್ಷಗಳ ನಂತರ ಪ್ರಧಾನಿ ಮೋದಿ ಬ್ರೂನೈಗೆ ಭೇಟಿ ನೀಡುತ್ತಿದ್ದಾರೆ. ಫಿಲಿಪೈನ್ಸ್‌ನಲ್ಲಿ ನಡೆದ 2017 ರ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಅವರು ಮತ್ತೆ ಭೇಟಿಯಾಗಿದ್ದರು.

ಜುಲೈನಲ್ಲಿ, ವಿದೇಶಾಂಗ ಸಚಿವ ಎಸ್ ಜೈಶಂಕರ್ (S Jaishankar) ಅವರು ಆಸಿಯಾನ್ ಸಭೆಗಳ ವೇಳೆ ಲಾವೋಸ್‌ನಲ್ಲಿ ಬ್ರೂನೈ ಸಚಿವರನ್ನು ಭೇಟಿಯಾದರು. 40 ವರ್ಷಗಳ ರಾಜತಾಂತ್ರಿಕ ಸಂಬಂಧವನ್ನು ಆಚರಿಸಲು, ಇಬ್ಬರೂ ಒಟ್ಟಿಗೆ ಲೋಗೋವನ್ನು ಸಹ ಬಿಡುಗಡೆ ಮಾಡಿದರು.

ಪ್ರಧಾನಿ ಮೋದಿಯವರ ಭೇಟಿಯು ವ್ಯಾಪಾರ ಸಂಬಂಧಗಳನ್ನು ವರ್ಧಿಸುವ, ಬಾಹ್ಯಾಕಾಶ ಮತ್ತು ರಕ್ಷಣಾ ವಲಯಗಳಲ್ಲಿ ಸಹಕಾರವನ್ನು ಹೆಚ್ಚಿಸುವತ್ತ ಗಮನ ಹರಿಸಲಿದೆ. ಭಾರತವು ಈಗಾಗಲೇ ಬಾಹ್ಯಾಕಾಶ ಕ್ಷೇತ್ರದಲ್ಲಿ ಬ್ರೂನೈಯೊಂದಿಗೆ ಅನೇಕ ಒಪ್ಪಂದಗಳನ್ನು ಹೊಂದಿದೆ. ದೇಶದಲ್ಲಿ ಟೆಲಿಮೆಟ್ರಿ ನಿಲ್ದಾಣವನ್ನು ಸಹ ಹೊಂದಿದೆ. ಪ್ರಧಾನಿಯವರ ಭೇಟಿಯು ಈ ನಿಟ್ಟಿನಲ್ಲಿ ಸಹಕಾರವನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದು MEA ಹೇಳಿದೆ.

ಭಾರತ ಮತ್ತು ಬ್ರೂನೈ ಕಚ್ಚಾ ತೈಲ ಮತ್ತು ಹೈಡ್ರೋಕಾರ್ಬನ್‌ಗಳ ವಿಷಯದಲ್ಲಿ ಇಂಧನ ಭದ್ರತೆಯಲ್ಲಿ ಸಂಬಂಧಗಳನ್ನು ಹೆಚ್ಚಿಸಲು ಸಹ ಮುಂದಾಗಿವೆ. ಪ್ರಸ್ತುತ ಭಾರತ ಬ್ರೂನೈಯಿಂದ 270 ಮಿಲಿಯ ಡಾಲರ್‌ ಮೌಲ್ಯದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. 2012 ರಿಂದ 2015 ರವರೆಗೆ ASEAN ಗೆ ಭಾರತವನ್ನು ಹತ್ತಿರ ತರುವಲ್ಲಿ ಬ್ರೂನೈ ಪ್ರಮುಖ ಪಾತ್ರವನ್ನು ವಹಿಸಿದೆ.