Saturday, 14th December 2024

PM Narendra Modi: ಇಂದು ಜಮ್ಮು ಕಾಶ್ಮೀರದ ದೋಡಾದಲ್ಲಿ ಪ್ರಧಾನ ಮಂತ್ರಿ ಮೋದಿ ಚುನಾವಣಾ ರ‍್ಯಾಲಿ

pm narendra modi

ಹೊಸದಿಲ್ಲಿ: ಮುಂಬರುವ ವಿಧಾನಸಭಾ ಚುನಾವಣೆಯ (Assembly Election) ಸಾರ್ವಜನಿಕ ರ‍್ಯಾಲಿಯನ್ನು (Election Rally) ಉದ್ದೇಶಿಸಿ ಮಾತನಾಡಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ಶನಿವಾರ ಜಮ್ಮು ಮತ್ತು ಕಾಶ್ಮೀರದ (Jammu Kashmir Election) ದೋಡಾಗೆ ಭೇಟಿ ನೀಡಲಿದ್ದಾರೆ. ಕಳೆದ 42 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದೋಡಾಗೆ ಪ್ರಧಾನಿಯೊಬ್ಬರು ಭೇಟಿ ನೀಡುತ್ತಿದ್ದಾರೆ.

“ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ತಮ್ಮ ಮೊದಲ ಚುನಾವಣಾ ಸಭೆಯನ್ನು ನಾಳೆ ದೋಡಾದಲ್ಲಿ ನಡೆಸಲಿದ್ದಾರೆ. ಕಳೆದ 42 ವರ್ಷಗಳಲ್ಲಿ ಪ್ರಧಾನಿಯೊಬ್ಬರು ದೋಡಾಗೆ ಭೇಟಿ ನೀಡುತ್ತಿರುವುದು ಇದು ಮೊದಲನೆಯದು. 1982ರಲ್ಲಿ ದೋಡಾಗೆ ಆಗಿನ ಪ್ರಧಾನಿ ಭೇಟಿ ನೀಡಿದ್ದರು ಎಂದು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಮತ್ತು ಜಮ್ಮು ಮತ್ತು ಕಾಶ್ಮೀರದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಚುನಾವಣಾ ಉಸ್ತುವಾರಿ ಜಿ ಕಿಶನ್ ರೆಡ್ಡಿ ಹೇಳಿದ್ದಾರೆ.

ಬಿಜೆಪಿಯ ಸ್ಟಾರ್ ಪ್ರಚಾರಕರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೋಡಾ ಸ್ಪೋರ್ಟ್ಸ್ ಸ್ಟೇಡಿಯಂನಲ್ಲಿ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆಗಸ್ಟ್ 31 ರಂದು ಚುನಾವಣಾ ಆಯೋಗ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಯನ್ನು ಘೋಷಿಸಿದ ನಂತರ ಇದು ಮೋದಿಯವರ ಮೊದಲ ರ್ಯಾಲಿ. ಮೋದಿ ಸೆಪ್ಟೆಂಬರ್ 19 ರಂದು ಶ್ರೀನಗರಕ್ಕೆ ಭೇಟಿ ನೀಡಲಿದ್ದಾರೆ.

ಜೆ & ಕೆ ವಿಧಾನಸಭಾ ಚುನಾವಣೆಯಲ್ಲಿ ಮೂರು ಹಂತಗಳಲ್ಲಿ ಸೆಪ್ಟೆಂಬರ್ 18, ಸೆಪ್ಟೆಂಬರ್ 25, ಮತ್ತು ಅಕ್ಟೋಬರ್ 1 ರಂದು ಮತದಾನ ನಡೆಯಲಿದೆ. ದೋಡಾ, ಕಿಶ್ತ್ವಾರ್ ಮತ್ತು ರಾಂಬನ್ ಜಿಲ್ಲೆಯ ಮೂರು ಜಿಲ್ಲೆಗಳ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಸೆಪ್ಟೆಂಬರ್ 18 ರಂದು ಮೊದಲ ಹಂತದ ಮತದಾನ ನಡೆಯಲಿದೆ. ಕನಿಷ್ಠ 16 ಸ್ಥಾನಗಳಿಗೆ ದಕ್ಷಿಣ ಕಾಶ್ಮೀರದಲ್ಲಿಯೂ ಅದೇ ದಿನ ಮತದಾನ ನಡೆಯಲಿದೆ. ಬಿಜೆಪಿ ದೋಡಾದಿಂದ ಗಜಯ್ ಸಿಂಗ್ ರಾಣಾ ಮತ್ತು ದೋಡಾ ಪಶ್ಚಿಮದಿಂದ ಶಕ್ತಿ ರಾಜ್ ಪರಿಹಾರ್ ಅವರನ್ನು ಕಣಕ್ಕಿಳಿಸಿದೆ.

ದೋಡಾ ನಂತರ, ಮುಂದಿನ ತಿಂಗಳು ನಡೆಯಲಿರುವ ಹರಿಯಾಣ ಅಸೆಂಬ್ಲಿ ಚುನಾವಣೆಯಲ್ಲಿ ತಮ್ಮ ಮೊದಲ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಲು ಪ್ರಧಾನಿ ಕುರುಕ್ಷೇತ್ರಕ್ಕೆ ತೆರಳಲಿದ್ದಾರೆ. ಹರಿಯಾಣದಲ್ಲಿ ಅಕ್ಟೋಬರ್ 5 ರಂದು ಮತದಾನ ನಡೆಯಲಿದೆ. ಜಮ್ಮು ಮತ್ತು ಕಾಶ್ಮೀರ ಮತ್ತು ಹರಿಯಾಣದ ಮತ ಎಣಿಕೆ ಅಕ್ಟೋಬರ್ 8 ರಂದು ನಡೆಯಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಮುನ್ನ ಇಡೀ ದೋಡಾ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಶುಕ್ರವಾರ, ಪಕ್ಕದ ಕಿಶ್ತ್ವಾರ್ ಜಿಲ್ಲೆಯ ಚತ್ರೂವಿನ ಪಿಂಗ್ನಾರ್ ಪ್ರದೇಶದಲ್ಲಿ ಭಯೋತ್ಪಾದಕರೊಂದಿಗೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಇಬ್ಬರು ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಬುಧವಾರ ಉಧಂಪುರ-ಕಥುವಾ ಗಡಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು ಇಬ್ಬರು ಶಸ್ತ್ರಸಜ್ಜಿತ ಭಯೋತ್ಪಾದಕರನ್ನು ಹತ್ಯೆಗೈದಿದ್ದರು. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರಾಡಳಿತ ಪ್ರದೇಶದಲ್ಲಿ ರಕ್ಷಣಾ ಸಿಬ್ಬಂದಿ ಕಾವಲು ಹೆಚ್ಚಿಸಿದ್ದಾರೆ. ಈ ವರ್ಷ ಜಮ್ಮುವಿನಲ್ಲಿ ನಡೆದ ಪ್ರತ್ಯೇಕ ಉಗ್ರರ ದಾಳಿಯಲ್ಲಿ 14 ಭದ್ರತಾ ಸಿಬ್ಬಂದಿ ಮತ್ತು 11 ನಾಗರಿಕರು ಸಾವನ್ನಪ್ಪಿದ್ದಾರೆ. ಈ ಪ್ರದೇಶದಲ್ಲಿ ಭದ್ರತಾ ಪಡೆಗಳು 10 ಉಗ್ರರನ್ನು ಹೊಡೆದುರುಳಿಸಿದ್ದಾರೆ.

ಇದನ್ನೂ ಓದಿ: CM Siddaramaiah: ಮೋದಿ ಅವಧಿಯಲ್ಲಿ ದೇಶದ ಸಾಲ 182 ಲಕ್ಷ ಕೋಟಿಗೆ ತಲುಪಿದೆ: ಸಿಎಂ ಸಿದ್ದರಾಮಯ್ಯ ಕಿಡಿ